Monday 25 November 2013

ಪ್ರಾರ್ಥನೆ ಫಲ ತರುವುದು ಯಾವಾಗ?



ಕರ್ತನಾದ ಯೇಸು ಹೀಗೆ ಹೇಳುತ್ತಾನೆ
  "ನೀವು ನನ್ನಲ್ಲಿಯೂ, ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು"  ಯೋಹಾನ 15:7

ಕರ್ತನಾದ ಯೇಸು  ಎಷ್ಟು ಮಹಿಮೆಯುಳ್ಳವನೋ ಅದರಂತೆ ಆತನ ವಾಕ್ಯಗಳನ್ನು ಒಳಗೊಂಡ ಸತ್ಯವೇದವು(ಬೈಬಲ್) ಮಹಿಮೆಯುಳ್ಳದ್ದಾಗಿದೆ.
ನಾವು ದೇವರಲ್ಲಿ ನೆಲೆಗೊಂಡಿರಬೇಕು, ಆತನ ಆಜ್ಞೆಗಳನ್ನು ನಮ್ಮ ಹೃದಯದಲ್ಲಿಟ್ಟು, ಅದರಂತೆಯೇ ನಡೆಯಬೇಕು. ದೇವರ ವಾಕ್ಯವು (ಆಜ್ಞೆಗಳು) ನಮ್ಮ ಕಾಲಿಗೆ ದೀಪವಾಗಿಯೂ, 
ನಮ್ಮ ಮಾರ್ಗಕ್ಕೆ ಬೆಳಕಾಗಿಯೂ ಇವೆ.  ಅದರಂತೆ ನಡೆಯುವವರಿಗೆ  ಆಡ್ಡಿ ಆತಂಕಗಳಿಲ್ಲ, ಕಾಲು ಜಾರುವುದೂ ಇಲ್ಲ, ಅದು ಸನ್ಮಾರ್ಗವಾಗಿರುತ್ತದೆ.

ಬಳ್ಳಿಯು ಗಿಡದಲ್ಲಿ ನೆಲೆಗೊಂಡಿರದಿದ್ದರೆ, ಅದು ಬೇರೆಯಾಗಿದ್ದು ಫಲಕೊಡಲು ಸಾದ್ಯವಿಲ್ಲ! 
ಆದ್ದರಿಂದ

 ನೀವು ಕ್ರಿಸ್ತನಲ್ಲಿ ನೆಲೆಗೊಂಡಿರಿ,
           ಆತನ ವಾಕ್ಯಗಳು ನಮ್ಮ ಹೃದಯಗಳಲ್ಲಿರಲಿ,

 ಆಗ ನಿಮ್ಮ ಪ್ರಾರ್ಥಿಸುವ ಪ್ರಾರ್ಥನೆಗಳು, ವಿಜ್ಞಾಪನೆಗಳು ದೇವರ ಸನ್ನಿಧಿಯನ್ನು ತಲುಪುತ್ತವೆ. ನಿಮ್ಮ ಹೃದಯದ ಬಯಕೆಗಳು, ನಿಮ್ಮ ಕೋರಿಕೆಗಳು ಯಾವುದಿದ್ದರೂ ಅವುಗಳನ್ನು ನೀವು ಹೊಂದಬಹುದು. ನಿಮ್ಮ ಕಾರ್ಯಗಳು ಸಫಲವಾಗುವುದು. ದೇವರು ನಿಮ್ಮ ಪಕ್ಷದಲ್ಲಿರುವನು. ನಿಮ್ಮ ಪ್ರಯಾಸಗಳು, ಪರಿಶ್ರಮಗಳು ವ್ಯರ್ಥವಾಗುವುದೇ ಇಲ್ಲ. 

 ನೀವು ದೇವರಲ್ಲಿ ನೆಲೆಗೊಂಡಿರದೆ, ಆತನಿಂದ ದೂರವಾಗುವಾಗ ಆತನೂ ನಿಮ್ಮಿಂದ ದೂರವಾಗುವನು.

"ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು"  ಯೋಹಾನ 15:6

Tuesday 5 November 2013

ಯಾಕೆ ಪ್ರಾರ್ಥಿಸಬೇಕು?




(ಗಮನವಿಟ್ಟು ಓದಿದರೆ ಮಾತ್ರ ದೇವರ ಈ ಯೋಜನೆಯನ್ನು ತಿಳಿಯಲು ಸಾಧ್ಯ. ಅರ್ಥವಾಗದಿದ್ದರೆ ಫೋನ್ ಮಾಡಿರಿ 9945804171)

"...ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವಿಗಳನ್ನೂ, ಕೃತಜ್ಞತಾಸ್ತುತಿಗಳನ್ನೂ ಮಾಡಿರಿ.....ಅರಸುಗಳಿಗಾಗಿಯೂ, ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು"  1 ತಿಮೊಥೆಯ 2:1

ಸರ್ವಲೋಕದ ಅಧಿಪತಿ, ಅಖಿಲಾಂಡವನ್ನು ನಿರ್ಮಿಸಿದವನು ಇಡೀ ಜಗತ್ತನ್ನು, ಅಧಿಕಾರಿಗಳನ್ನೂ, ರಾಜಕೀಯ ನಾಯಕರನ್ನೂ ಸನ್ಮಾರ್ಗಕ್ಕೆ ತಂದು ಆತ್ಮರಕ್ಷಣೆಯನ್ನೂ, ಪಾಪಕ್ಷಮಾಪಣೆಯ ನಿಶ್ಚಯವನ್ನೂ ಅನುಗ್ರಹಿಸಲು ಸಾಧ್ಯವಿಲ್ಲವೇ? ದೇವಮನುಷ್ಯನು ಪ್ರಾರ್ಥಿಸಬೇಕೆಂದು ದೇವರು ಎದುರು ನೋಡುವುದು ಯಾಕೆ? ದೇವ ಜನರ ಪ್ರಾರ್ಥನೆಯಿಲ್ಲದೆ ದೇವರು ತನ್ನ ಕಾರ್ಯವನ್ನು ನೆರವೇರಿಸಲು ಸಾಧ್ಯವಿಲ್ಲವೇ?

ಹೌದು ಸಾಧ್ಯವೇ ಇಲ್ಲ!!!

ಯಾಕೆಂದರೆ.....,
ದೇವರು ಈ ಲೋಕವನ್ನೂ ಅದರಲ್ಲಿರುವ ಸಮಸ್ತವನ್ನು ಉಂಟುಮಾಡಿ ಅದನ್ನು ಮನುಷ್ಯನಿಗೆ ಕೊಟ್ಟನು. ಬೈಬಲ್ ನಲ್ಲಿ ಆದಿಕಾಂಡ ಎಂಬ ಭಾಗದಲ್ಲಿ  ನಾವು ನೋಡುವಂತೆ ದೇವರು ತನ್ನ ಸ್ವಾರೂಪ್ಯದಲ್ಲಿ ಉಂಟು ಮಾಡಿದ ಆದಾಮ ಮತ್ತು ಹವ್ವರನ್ನು ಅಶೀರ್ವದಿಸಿ "ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ" ಅಂದನು.  ಅದರ ಯಥಾರ್ಥ ಅರ್ಥವೇನೆಂದರೆ, ದೇವರು ತಾನು ಉಂಟು ಮಾಡಿದ ಸಮಸ್ತ ಆಸ್ತಿಯನ್ನೂ, ಅದರ ಮೇಲಿನ ದೊರೆತನವನ್ನೂ ಮನುಕುಲದ ಹೆಸರಿಗೆ ವರ್ಗಾಯಿಸಿದನು. ಅಂದರೆ ಈ ಜಗತ್ತಿನ ಹಕ್ಕುದಾರ ಮನುಷ್ಯನಾಗಿ ಮಾರ್ಪಡುತ್ತಾನೆ. ಹಕ್ಕುದಾರನ ಅನುಮತಿ ಅಥವಾ ಕೋರಿಕೆಯಿಲ್ಲದೆ (ಪ್ರಾರ್ಥನೆ) ದೇವರು ಈ ಜಗತ್ತಿನ ಕಾರ್ಯಗಳಲ್ಲಿ ಹಸ್ತಕ್ಷೇಪಮಾಡುವ ಹಾಗಿಲ್ಲ. ಯಾಕೆಂದರೆ, ಆತನು ನೀತಿಯುಳ್ಳ ನ್ಯಾಯಾಧಿಪತಿ! 

ಮನುಷ್ಯನು ಹಕ್ಕುದಾರನಾದ ಮೇಲೆ ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳದೆ ವಂಚಕನಾದ ಸೈತಾನನ ಬಳಿ ಒತ್ತೆಯಿಟ್ಟ ಅಂದರೆ ದೇವರ ಆಲೋಚನೆಯನ್ನು ಕೇಳಿ ಅದರಂತೆ ಈ ಜಗವನ್ನು ಮುನ್ನಡೆಸಿಕೊಂಡು ಹೋಗುವ ಬದಲು ದೇವಲೋಕಕ್ಕೆ ವೈರಿಯಾದ ಸೈತಾನನ ವಂಚನೆಯ ಆಲೋಚನೆಯನ್ನು ಕೇಳಿ ತನಗೆ ಅನುಗ್ರಹವಾಗಿ ದೊರಕಿದ ಎಲ್ಲಾ ಅಂತಸ್ತು, ಅಧಿಕಾರವನ್ನು ಸೈತಾನನಿಗೆ ಒತ್ತೆಯಿಟ್ಟ. ಇದಕ್ಕೆ ಆಧಾರವಾಗಿ ಲೂಕನ ಸುವಾರ್ತೆ ೪:೬ ರಲ್ಲಿ ಈ ರೀತಿಯಾಗಿ ನೋಡುತ್ತೇವೆ. "ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟಿದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ;" ವಾಸ್ತವದಲ್ಲಿ  ಈ ಲೋಕದ ಅಧಿಕಾರ ದೇವರಿಂದ ಸೈತಾನನಿಗೆ ಕೊಡಲ್ಪಡಲಿಲ್ಲ ಬದಲಾಗಿ ದೇವರಿಂದ - ಮನುಷ್ಯನಿಗೆ ಕೊಡಲ್ಪಟ್ಟಿತು-ಮನುಷ್ಯನು ತನ್ನ ಅವಿಧೇಯತೆಯಿಂದ ಸೈತಾನನಿಗೆ ಒತ್ತೆಯಿಟ್ಟ. ಒತ್ತೆಯಿಟ್ಟಾಗ ಈ ಲೋಕದ ಮೇಲಿನ ಅಧಿಕಾರ ಸೈತಾನನಿಗೆ ವರ್ಗಾಯಿಸಲ್ಪಟ್ಟಿತು.

ದೇವರ ಪ್ರತಿಯೊಂದು ಯೋಜನೆಯನ್ನೂ ಕೆಡಿಸಬೇಕೆಂದು ಸೈತಾನನು ಪಣತೊಟ್ಟು ಕಾಯುತ್ತಿದ್ದ.. 

ಯಾಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ ಮೊದಲ ಸೈತಾನನ ಚರಿತ್ರೆಯನ್ನು ಸ್ವಲ್ಪ ಗಮನಿಸೋಣ. ಸೈತಾನ ಎಂಬುವವನು ಮೊದಲು ಲೂಸಿಫೆರನಾಗಿ ದೇವರಿಂದ ಉಂಟುಮಾಡಲ್ಪಟ್ಟ ಒಂದು ಗುಂಪಿನ ದೇವದೂತರ ಆರಾಧನಾ ತಂಡದ ನಾಯಕ. (ಯೆಶಾಯ ೧೪ನೇ ಅಧ್ಯಾಯದಲ್ಲಿ ಸವಿವರವಾಗಿ  ಲೂಸಿಫ಼ೆರನು ಉನ್ನತ ಪದವಿಯಿಂದ ಹೇಗೆ ತಳ್ಳಲ್ಪಟ್ಟನು ಎಂಬುದನ್ನು ನೋಡಬಹುದು.) "... ಉನ್ನತೋನ್ನತನಿಗೆ ಸರಿಸಮಾನನಾಗುವೆನು" ಅಂದರೆ ದೇವರಿಗೆ ಸರಿಸಮಾನನಾಗಬೇಕೆಂದು ಅಂದುಕೊಂಡದ್ದರಿಂದ ಪಾತಾಳಕ್ಕೆ ದೊಬ್ಬಲ್ಪಟ್ಟನು. ದೇವರು ನೀತಿಯುಳ್ಳವನು ಹಾಗೂ ತಾನು ಕೊಟ್ಟದ್ದನ್ನು ಹಿಂದಕ್ಕೆ ತೆಗೆದುಕೊಳ್ಳದವನಾಗಿರುವುದರಿಂದ ಲೂಸಿಫ಼ೆರನು ದೇವದೂತನಾಗಿದ್ದಾಗ ಅವನಿಗೆ ಇದ್ದಂತಹ ಕೆಲವು ಸೌಲಭ್ಯಗಳನ್ನು ದೇವರು ಹಿಂದಕ್ಕೆ ತೆಗೆಯಲಿಲ್ಲ, ಅದನ್ನೇ ಬಂಡವಾಳವನ್ನಾಗಿಸಿಕೊಂಡು ಸೈತಾನನು ಇಂದಿನವರೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಬಂದಿದ್ದಾನೆ. 

ದೇವರನ್ನು ಪರಲೋಕದಲ್ಲಿ ಮಹಿಮೆಪಡಿಸಲು ಇದ್ದ ಗುಂಪು(ಲೂಸಿಫೆರನ ಗುಂಪು) ತೆರವಾದ್ದದರಿಂದ ಆ ಸ್ಥಾನಕ್ಕೆ ಮನುಷ್ಯರನ್ನು ತಂದು ನಿಲ್ಲಿಸುವ ಸಲುವಾಗಿ ದೇವರು ಮನುಕುಲವನ್ನು ಸೃಷ್ಟಿ ಮಾಡಬೇಕಾಯಿತು, ಇದನ್ನು ನೋಡಿದ ಲೂಸಿಫೆರನಿಗೆ ತಡೆದುಕೊಳ್ಳಲಾಗಲಿಲ್ಲ, ತಾನು ಇದ್ದ ಆ ವೈಭವವಾದ ಸ್ಥಾನದಲ್ಲಿ ಈ ಮನುಷ್ಯ ಆಸೀನನಾಗುವುದನ್ನು ಸಹಿಸಲಾಗದೆ ಹೇಗಾದರೂ ದೇವರ ಈ ಯೋಜನೆಯನ್ನು ಕೆಡವಬೇಕೆಂದು ವಂಚನೆಯ ಮೂಲಕ ಮನುಷ್ಯನನ್ನು ತನ್ನ ಕೆಡೆಗೆ ಸೆಳೆದು ಈ ಲೋಕದ ಅಧಿಕಾರವನ್ನು ತನಗೆ ವರ್ಗಾಯಿಸಿಕೊಂಡ. ಹೀಗೆ ಭೂಮಿಯೂ ಅದರ ಸಮಸ್ತ ಅಧಿಕಾರವೂ ಮನುಷ್ಯನಿಂದ ಸೈತಾನನ ವಶಕ್ಕೆ ಹೋಯಿತು. 

ಹೀಗೆ ಮನುಷ್ಯನ  ಮುಖಾಂತರ ಸೈತಾನನಿಗೆ ಒತ್ತೆಯಿಟ್ಟ ಸಮಸ್ತವನ್ನೂ ಹಿಂತಿರುಗಿ ಪಡೆಯಬೇಕಾದರೆ ದೇವ ಲೋಕದ ನಿಯಮದ ಪ್ರಕಾರವೇ ಆಗಬೇಕು. ಅದೇನಂದರೆ ಒತ್ತೆಯಿಟ್ಟವನು ಅಥವಾ ಅವನ ಸಂತತಿ ಮಾತ್ರ ಅದನ್ನು ಬಿಡಿಸಬಹುದು ಆದರೆ ಅದಕ್ಕೆ  ನಿಷ್ಕಳಂಕವಾದ ರಕ್ತವನ್ನು ಈಡಾಗಿ ಕೊಡಬೇಕಾಗಿತ್ತು. ಆದರೆ ಇಡೀ ಮನುಕುಲವೇ ಪಾಪದಲ್ಲಿ ಅಂದರೆ ಸ್ತ್ರೀ-ಪುರುಷ ಸಂಪರ್ಕದಿಂದ ಜನ್ಮ ತಾಳಿದ್ದರಿಂದ ಅಲ್ಲಿ ನಿಷ್ಕಳಂಕ ರಕ್ತ ಹೊಂದಿದವರು ಯಾರೂ ಇರಲಿಲ್ಲ.  ಆಗ ತಂದೆಯಾದ ದೇವರಿಗೆ ಇದ್ದಂತಹ ಒಂದು ಮಾರ್ಗವೆಂದರೆ ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಕಳುಹಿಸುವುದಾಗಿತ್ತು. ಆಗ ಮರಿಯಳು ಎಂಬ  ಕನ್ನಿಕೆಯನ್ನು ಆರಿಸಿ ಆಕೆ ಪವಿತ್ರಾತ್ಮನಿಂದ ಗರ್ಭವತಿಯಾಗಿ ಲೋಕ ರಕ್ಷಕನಿಗೆ ಜನ್ಮ ನೀಡುವ ಹಾಗೆ ತಂದೆಯಾದ ದೇವರು ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸಿದನು. 

ಆದಾಮನ ಮೂಲಕ ಒತ್ತೆಯಿಟ್ಟ ಈ ಲೋಕವು ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ ಮತ್ತೆ ಈ ಮನುಕುಲಕ್ಕೆ ದೊರೆಯಿತು. ಹೀಗೆ ಸಮಸ್ತ ಅಧಿಕಾರವು ಮನುಷ್ಯನಿಗೆ ವರ್ಗಾಯಿಸಲ್ಪಟ್ಟಿರುವುದರಿಂದ ದೇವರು ಈ ಭೂಮಿಯಲ್ಲಿ ತನ್ನ ಕ್ರಿಯೆಗಳನ್ನು ಮಾಡಬೇಕಾದರೆ ದೇವರಿಗೆ ಒಬ್ಬ ವ್ಯಕ್ತಿಯ ಅವಶ್ಯಕತೆಯಿದೆ, ಆತನೇ ’ಪ್ರಾರ್ಥನಾ ಯೋಧ’. ಮನುಷ್ಯನು ಪ್ರಾರ್ಥಿಸದಿದ್ದರೆ ದೇವರು ಈ ಭೂಮಿಯಲ್ಲಿ ಕ್ರಿಯಾಶೀಲನಾಗಲು ಸಾಧ್ಯವಿಲ್ಲ.
 
ಓ ಸ್ನೇಹಿತನೇ, ಪ್ರಾರ್ಥಿಸಲು ಸಿದ್ಧನಿರುವೆಯಾ? 

ಪ್ರಾರ್ಥಿಸಲು ಕಲಿಯಿರಿ! ಪ್ರಾರ್ಥಿಸಿರಿ!! ದೇಶದಲ್ಲಿ ಬದಲಾವಣೆಯನ್ನು ಕಾಣಿರಿ!!!