Thursday 31 October 2013

ಪ್ರಾರ್ಥನಾ ಜೀವಿತ ನಿಮ್ಮದಾಗಲಿ! ನಿಮ್ಮ ಜೀವಿತ ರೂಪಾಂತರವಾಗಲಿ!!


ಆತ್ಮೀಯರೇ,

 ಮಾದರಿ ಪ್ರಾರ್ಥನೆಗಳು ನಿಮಗೂ ದೇವರಿಗೂ ನಡುವೆ ನೇರ ಸಂಪರ್ಕವನ್ನು ಸಾಧಿಸುವಲ್ಲಿ ನಿಮಗೆ ಸಹಾಯ ಮಾಡಿದೆ ಎಂದು ನಂಬುತ್ತೇವೆ.
ಈ ಎರಡನೆಯ ಭಾಗವು 1ತಿಮೊಥೆಯನಿಗೆ 2:1-4 ನೇ ವಚನದಿಂದ ಪ್ರಾರಂಭವಾಗುತ್ತದೆ " ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. ಹಾಗೆ ಮಾಡುವದು ನಮ್ಮಾ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ."  ಹೌದು ದೇವರ ಚಿತ್ತವನ್ನು ನೆರವೇರಿಸಲೆಂದೇ ನಾವು ಈ ಭೂಮಿಯಲ್ಲಿ ಇಡಲ್ಪಟ್ಟು ಕೃಪೆಯಿಂದ ರಕ್ಷಿಸಲ್ಪಟ್ಟಿದ್ದೇವೆ.
ಆದರೆ ಇದನ್ನು ಮಾಡಲು ನಮ್ಮ ಆತ್ಮಸಮರ್ಪಣೆ ಅನಿವಾರ್ಯವಾಗಿದೆ ! ಹೌದು ದೀಪವು ತನ್ನಲ್ಲಿರುವದನ್ನು ಕೊಡದಿದ್ದರೆ ಬೆಳಗಲಾರದು - ಉಪ್ಪು ನೀರಿನಲ್ಲಿ ಕರಗದಿದ್ದರೆ ರುಚಿಕೊಡಲಾರದು.(ಮತ್ತಾಯ 5:13-14)
 ಈ ಲೋಕಕ್ಕೆ ಬೆಳಕಾಗಿಯೂ ಭೂಮಿಗೆ ಉಪ್ಪಾಗಿಯೂ ಕರೆಯಲ್ಪಟ್ಟಿರುವ ನೀವು ನಿಮ್ಮ ಸ್ವಹಿತವನ್ನು ತ್ಯಜಿಸಿ ದೇವರಿಗೆ ನಿಮ್ಮ ಸಂಪೂರ್ಣ ಜೀವಿತವನ್ನೂ ಹೃದಯದಲ್ಲಿ ಪ್ರಥಮಸ್ಥಾನವನ್ನೂ ಕೊಡದಿದ್ದರೆ ಹೇಗೆ ಬೆಳಕಾಗಿಯೂ-ಉಪ್ಪಾಗಿಯೂ ಇರಲು ಸಾಧ್ಯ ? ಆದ್ದರಿಂದ ಈ ಮಧ್ಯಸ್ಥಿಕೆಯ ಪ್ರಾರ್ಥನೆಗೆ ನಿಮ್ಮ ಸಮರ್ಪಣಾ ಜೀವಿತದ ಕ್ರಯಸಲ್ಲಿಸುವಿಕೆ ಅತ್ಯಾವಶ್ಯವಾಗಿದೆ.
ಯಾಕೆಂದರೆ ದೇವರಿಂದ ಕೇಳಿ ಪಡೆಯಲು ನಾವು ಹಕ್ಕುಳ್ಳವರಾಗಿದ್ದೇವೆ ಆತನು ನಮ್ಮ ತಂದೆಯೂ ನಾವು ಆತನ ಮಕ್ಕಳೂ ಆಗಿರುವದರಿಂದ ಈ ಹಕ್ಕು ನಮಗುಂಟು ! ಆದರೆ ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿ ನಾವು ನಮಗಾಗಿ ಅಲ್ಲ ಬೇರೆಯವರ ಪರವಾಗಿ  ದೇವರ ಸಮ್ಮುಖದಲ್ಲಿ ನಿಂತು ಪಾತ್ರರಲ್ಲದವರನ್ನು ಪಾತ್ರರನ್ನಾಗಿಸುವಂತೆ ದೇವರ ಕರುಣೆಗಾಗಿ ಬೇಡುವವರಾಗಿಯೂ - ಬಂಧನದಲ್ಲಿರುವವರ ಕಟ್ಟುಗಳನ್ನು ಬಿಚ್ಚಲು ಶತ್ರುವಿನೊಂದಿಗೆ ಹೋರಾಡಲು ಮುಂದುವರೆಯುತ್ತಿದ್ದೇವೆ ! ಆದರೆ ಇದಕ್ಕೆ ನಮಗೆ ಕೆಲವು ಅರ್ಹತೆ ಮತ್ತು ಅಧಿಕಾರದ ತಿಳುವಳಿಕೆಯ ಅಗತ್ಯವಿದೆ.

ಅದನ್ನು ತಿಳಿಯುವ ಮೊದಲು ಕೆಲವು ತಡೆಗಳನ್ನು ದಾಟಿ ಮುಂದೆ ಹೋಗುವ;
 ಈ ಸತ್ಯವನ್ನು ಅರಿಯದವರು ಇದು ದೇವರಿಂದ ಬಂದದ್ದಲ್ಲವೆಂದೂ ಮನುಷ್ಯ ಕಲ್ಪನೆಯೆಂದೂ ವಿವಾದಿಸಬಹುದು ಆದರೆ ದೇವರವಾಕ್ಯವು  1ಪೇತ್ರನು 2:9 ರಲ್ಲಿ " ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕಿಯ ಪ್ರಜೆಯೂ ಆಗಿದ್ದೀರಿ." ಎಂದು ಬರೆದದೆ. ದೇವರು ನಮ್ಮ ಪ್ರತಿಯೊಬ್ಬರನ್ನೂ ರಾಜರನ್ನಾಗಿಯೂ ಯಾಜಕರನ್ನಾಗಿಯೂ ಕರೆದಿರುವದರಿಂದ ನಾವು ರಾಜನ ಸ್ಥಾನದಲ್ಲಿ ನಿಂತು ಶತ್ರುವಿನೊಂದಿಗೆ ಹೋರಾಡುವದೂ ಯಾಜಕನ ಸ್ಥಾನದಲ್ಲಿ ನಿಂತು ಎಲ್ಲಾ ಮನುಷ್ಯರಿಗಾಗಿ ದೇವರ ಸಮ್ಮುಖದಲ್ಲಿ ವಿಜ್ಞಾಪಿಸುವದೂ ನಮಗೆ ಅನಿವಾರ್ಯವಾಗಿದೆ. ಆದರೂ ಇದು ನಮ್ಮಿಂದಾಗದು ನಮಗೆ ಸಮಯವಿಲ್ಲಾ ಅಥವಾ ನಾವು ಬೇರೆ ರೀತಿಯಲ್ಲಿ ಸೇವೆಮಾಡುತ್ತೇವೆ ಎಂದು ಹೇಳುವವರಿಗೆ ಒಂದು ಸತ್ಯವನ್ನು ಹೇಳಲು ಬಯಸುತ್ತೇವೆ. ಒಂದು ನಿಮಿಷ ನೀವು ನಿಮ್ಮ ಸ್ವಂತ ಜೀವಿತದ ಕುರಿತಾದ ನಿಮ್ಮ ಸ್ವಾರ್ಥ ಚಿಂತನೆಗಳನ್ನೂ ಕನಸುಗಳನ್ನೂ ನಿಮ್ಮದೇ ಆದ ಯೋಜನೆಗಳನ್ನೂ ಬದಿಗಿರಿಸಿ ದೇವರ ದೃಷ್ಠಿಯಲ್ಲಿ ನೀವು ಹೇಗಿದ್ದೀರಿ? ನಿಮ್ಮ ಜೀವನದ ಕುರಿತಾಗಿ ಆತನು ರೂಪಿಸಿರುವ ಯೋಜನೆಗಳೇನು? ಯಾತಕ್ಕಾಗಿ ಈ ಭೂಮಿಯಲ್ಲಿ ಜೀವಿಸುತ್ತಿದ್ದೀರಿ ನಿಮ್ಮದೇ ಆದ ಪ್ರಪಂಚದಲ್ಲಿ ವಿಹರಿಸಲೋ ಅಥವಾ ನಿಮ್ಮ ಸೃಷ್ಠಿಕರ್ತನ ಪ್ರಯೋಜನಕ್ಕಾಗಿಯೋ? ಎಂಬದನ್ನು ಆಲೋಚಿಸಿರಿ ! ದೇವರು  ಹೇಗೆ ನಿಮ್ಮನ್ನು ಒಬ್ಬ ರಾಜರಾಗಿ ಯಾಜಕರಾಗಿ ಕಾಣುತ್ತಿರುವರೋ  ನೀವೂ ನಿಮ್ಮನ್ನು ಹಾಗೆಯೇ ನೋಡಿರಿ ನೀವು ನಿಮ್ಮನ್ನೂ ನಿಮ್ಮ ಜೀವಿತವನ್ನೂ ಕುರಿತಾಗಿ ಯೋಚಿಸುವ ವಿಧವನ್ನು ಬದಲಾಯಿಸಿರಿ ! ದೇವರ ಕೈಗಳಲ್ಲಿ ನಿಮ್ಮ ಜೀವಿತವನ್ನು ರೂಪಾಂತಕ್ಕಾಗಿ ಒಪ್ಪಿಸಿಕೊಡಿರಿ! ದೇವರ ವಾಕ್ಯದ ಗೂಡಾರ್ಥಗಳನ್ನು ಪ್ರಕಟಿಸುವಂತೆ ದೇವರಾತ್ಮನಲ್ಲಿ ಬಿನ್ನಹಿಸಿರಿ ದೇವರ ಸಮ್ಮುಖದಲ್ಲಿ ಕಾದಿರಿ! ದೇವರಾತ್ಮನ ಮಾರ್ಗದಲ್ಲಿ ಮುನ್ನಡೆಯಿರಿ.
ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೇನೆಂದರೆ ಹೇಗೆ ದೇವರ ಬಳಿಯಲ್ಲಿ ನಾವು ನಮಗಾಗಿ ಬೇಡಿ ಪಡೆದುಕೊಳ್ಳಲು ದೇವರ ಮಕ್ಕಳು ಎಂಬ ಸ್ಥಾನ ನಮಗಿದೆಯೋ ಹಾಗೆಯೇ ಪರರಿಗಾಗಿ ವಿಜ್ಞಾಪಿಸಲು ಅದರದೇ ಆದ ಸ್ಥಾನ ಮಾನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
ಹೇಗೆ ಒಂದು ಕೀಲಿಕೈ ಇಲ್ಲದೆ ಬಾಗಿಲನ್ನು ತೆರೆಯಲಾಗುವದಿಲ್ಲವೋ ಹಾಗೆಯೇ ಅರ್ಹರಾಗದೆ-ಅಧಿಕಾರವನ್ನು ತಿಳಿದುಕೊಳ್ಳದೆ ನಾವು ನಮ್ಮ ಸ್ಥಾನದಲ್ಲಿ ನಿಂತು ಕಾರ್ಯನಿರ್ವಹಿಸಲಾಗುವದಿಲ್ಲ. 
ಹಾಗಾದರೆ ಬನ್ನಿ ಅವುಗಳನ್ನು ತಿಳಿದುಕೊಳ್ಳೋಣ!

1. ಪರಿಶುದ್ಧತೆ:
 ಪರಿಶುದ್ಧತೆಯ ಬಗ್ಗೆ ಅನೇಕ ಬೋಧನೆಗಳುಂಟು ಆದರೆ ಇಲ್ಲಿ ನಿಮಗೆ ಯೇಸುಕ್ರಿಸ್ತನ ಮಾದರಿಯನ್ನು ಪರಿಚಯಿಸುತ್ತಿದ್ದೆವೆ. ಪರಿಶುದ್ಧತೆ ಎಂದರೆ ದೇವರಿಗಾಗಿ ಪ್ರತ್ಯೇಕಿಸಲ್ಪಟ್ಟ ಜೀವಿತ ಜೀವಿಸುವದು, ಅದು ಅಂತರಂಗದಲ್ಲಿ ಪ್ರಾರಂಭಿಸುತ್ತದೆ ! 
ತೋರಿಕೆಗಾಗಿ ಜನರಮುಂದೆ ಮತ್ತು ಸಭೆಗಳಲ್ಲಿ ಪರಿಶುದ್ಧರಂತೆ ವರ್ತಿಸುವದು ಪರಿಶುದ್ಧ ಜೀವಿತವಲ್ಲ ಹೃದಯವನ್ನು ಪರಿಶೋಧಿಸುವವನೂ ಬಾಯಿಂದ ಮಾತುಗಳು ಹೊರಡುವ ಮೊದಲೇ ಅವುಗಳನ್ನು ಅರಿತವನು ಆಗಿರುವ ದೇವರ ಮುಂದೆ ನಂಬಿಗಸ್ಥರಾಗಿ ಬಾಳುವದೇ ಪರಿಶುದ್ಧ ಜೀವಿತ (ಆದಿಕಾಂಡ 17:1) ಪ್ರಾರ್ಥನೆಗೆ ಪರಿಶುದ್ಧತೆಯೇ ಭೂಷಣ ಯಾಕೆಂದರೆ ಪರಿಶುದ್ಧತೆಯಿಲ್ಲದೆ ಯಾವನೂ ದೇವರನ್ನು ಕಾಣುವದಿಲ್ಲ (ಇಬ್ರಿಯರಿಗೆ 12:15) ದೇವರನ್ನು ನಾವು ಸಂದಿಸುವ ಸಮಯವು ಪ್ರಾರ್ಥನೆಯಾಗಿದೆ ! ಅಲ್ಲಿಯೇ ನಾವು ದೇವರ ಮುಖವನ್ನು ದರ್ಶಿಸುವವು !

2.  ದೇವರಲ್ಲಿ ನೆಲೆಗೊಂಡಿರುವದು :
ದೇವರಲ್ಲಿ ನೆಲೆಗೊಳ್ಳುವದೆಂದರೆ ಹೇಗೆ ನೀರಿನ ಬುಗ್ಗೆಯೂ ಎಲ್ಲಾ ಕಾಲಗಳಲ್ಲಿಯೂ ಬತ್ತಿಹೋಗದೆ ನೀರು ಉಕ್ಕಿಸುತ್ತದೋ ಹಾಗೆಯೇ ನಮ್ಮ ಸಂದರ್ಭ ಸನ್ನಿವೇಶಗಳನ್ನೂ ಜೀವನದ ಹಾಗುಹೋಗುಗಳನ್ನು ಪರಿಗಣಿಸದೆ ದೇವರಲ್ಲಿಯೂ ಆತನ ಕಾರ್ಯದಲ್ಲಿಯೂ ಆಸಕ್ತಿಯಿಂದಿರುವದು ಮತ್ತು ಆತನನ್ನು ಪ್ರೀತಿಸುವದು ! ಆತನನ್ನು ಪ್ರೀತಿಸುವದೆಂದರೆ ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವದು, ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವದೆಂದರೆ ಎಲ್ಲಾ ಮನುಷ್ಯರನ್ನೂ ನಿನ್ನಂತೆಯೇ ಪ್ರೀತಿಸುವದು! (ಯೋಹಾನ 14:23, 15:9-12  ಮತ್ತು ಮತ್ತಾಯ 7:12)

3. ನಂಬಿಕೆ:
ನಂಬಿಕೆ ಎಂಬುದು ಕ್ರೈಸ್ತಜೀವಿತದ ಅಡಿಪಾಯವಾಗಿದೆ! ನಂಬಿಕೆಯೇ ನಾವು ರಕ್ಷಣೆ ಹೊಂದಲು ಮೊದಲ ಹೆಜ್ಜೆಯಾಗಿದೆ(ಅಪೋಸ್ತಲರ ಕೃತ್ಯ 16:31) ಮತ್ತು ಪ್ರಾರ್ಥನೆಗೆ ನಂಬಿಕೆ ಜೀವನಾಡಿಯಾಗಿದೆ ಯಾಕೆಂದರೆ ನಂಬಿಕೆಯಿಲ್ಲದೆ ದೇವರಬಳಿಯಿಂದ ಏನನ್ನೂ ಹೊಂದಲಾರೆವು (ಯಾಕೋಬನು 1:6-7) ಕ್ರಿಯೆಗಳಿಲ್ಲದ ನಂಬಿಕೆಯೂ ನಂಬಿಕೆಯಿಲ್ಲದ ಪ್ರಾರ್ಥನೆಯೂ ಸತ್ತದ್ದೇ ಆದ್ದರಿಂದ " ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ ಎಂಬುದು ನಮ್ಮ ಕರ್ತನಾದ ಯೇಸುಕ್ರಿಸ್ತನ ಮಾದರಿಯಾಗಿದೆ, ನಂಬಿಕೆಯು ಆತ್ಮೀಕ ರಣರಂಗದಲ್ಲಿ ಶತ್ರುವಿನ ಅಗ್ನಿಬಾಣಕ್ಕೆ ನಮ್ಮನ್ನು ತಪ್ಪಿಸಿ ಕಾಪಾಡುವ ಗುರಾಣಿಯಾಗಿದೆ (ಎಫೆಸದವರಿಗೆ 6:16)

4. ನಂಬಿಗಸ್ಥಿಕೆ (ಪ್ರಾಮಾಣಿಕತೆ): 
ನಾವು ನಮ್ಮ ಅನುದಿನದ ಸಾಮಾನ್ಯ ಜೀವನದಲ್ಲಿ ಪ್ರತಿಯೊಬ್ಬರೂ ನಮ್ಮಿಂದ ಪ್ರಾಮಾಣಿಕತೆಯನ್ನು ಎದುರುನೋಡುವದನ್ನು ಗ್ರಹಿಸಬಹುದು.  ಅಪ್ರಾಮಾಣಿಕರಾದ ಮನುಷ್ಯ್ರರೇ ಪ್ರಾಮಾಣಿಕತೆಯನ್ನು ಎದುರುನೋಡುವದಾದರೆ  ಪರಿಶುದ್ಧನೂ ನೀತಿವಂತನೂ ಆಗಿರುವ ಸರ್ವಶಕ್ತನಾದ ದೇವರು ನಮ್ಮ ಬಳಿ ಪ್ರಾಮಾಣಿಕತೆಯನ್ನು ಎದುರುನೋಡುವದು ನ್ಯಾಯವಲ್ಲವೇ? ಪ್ರಾಮಾಣಿಕತೆ ಎಂದರೆ ಅಂತರಂಗವಾಗಿಯೂ
ಬಹಿರಂಗವಾಗಿಯೂ ದೇವರಿಗಾಗಿ ಜೀವಿಸುವದರಲ್ಲಿಯೂ ಆತನಿಗಾಗಿ ಕಾರ್ಯಗಳನ್ನು ಮಾಡುವದರಲ್ಲಿಯೂ ನೂರಕ್ಕೆ ನೂರರಷ್ಠು ಆತನ ಮಾರ್ಗದಲ್ಲಿ ನಡೆಯುವದು ಸ್ವಲ್ಪವೂ ನಮ್ಮ ಸ್ವಂತ ಬಯಕೆಯಿಂದಾಗಲಿ ಆಲೋಚನೆಯಿಂದಾಗಲೀ ಸ್ವಂತ ಲಾಭಕ್ಕಾಗಿ ಏನನ್ನೂ ಮಾಡದೆ ಆತನ ಚಿತ್ತವನ್ನು ಮಾತ್ರವೇ ಮಾಡುವದು! ಹೀಗೆ ಪ್ರತಿಯೊಂದು ಕಾರ್ಯವನ್ನೂ ದೇವರ ಆಲೋಚನೆಯಂತೆ ಮಾಡಿದ ಮೋಶೆಯನ್ನು ದೇವರು ಇವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ಥನೆಂದು ಸಾಕ್ಷಿ ಕೊಡುತ್ತಾರೆ (ಅರಣ್ಯಕಾಂಡ 12:7) ಆದರೆ ಇದೇ ಮೋಶೆ ದೇವರ ಆಲೋಚನೆಯೊಂದಿಗೆ ತನ್ನ ಅಸಹನೆಯನ್ನು ಬೆರೆಸಿದಾಗ ಕಾನಾನಿನ ಮಹಾ ಭಾಗ್ಯವನ್ನು ಕಳೆದುಕೊಂಡು ಕಾನಾನಿನ ಬಾಗಲಲ್ಲೆ ತನ್ನ ಜೀವನವನ್ನು ಅರ್ಧಕ್ಕೆ ಮುಗಿಸುತ್ತಾನೆ (ಧರ್ಮೋಪದೇಶಕಾಂಡ 32: 48-52 ) ಆದ್ದರಿಂದ ಕಡೆವರೆಗು ಕರ್ತನಿಗೆ ನಂಬಿಗಸ್ಥರಾಗಿ ಜೀವಿಸುವದೇ ಪ್ರಾರ್ಥನೆಯಲ್ಲಿಯೂ ಜೀವನದಲ್ಲಿಯೂ ಜಯಭರಿತ ಜೀವಿತವಾಗಿದೆ.

5. ಕ್ರಮವಾದ ಪ್ರಾರ್ಥನಾ ಜೀವಿತ:
ಅನುದಿನವು ದೇವರಸಮ್ಮುಖದಲ್ಲಿ ದೇವರೊಂದಿಗೆ ಸಮಯ ಕಳೆಯುವದು ಒಬ್ಬ ಪ್ರಾರ್ಥನಾ ವೀರನ ಅಥವಾ ಆತ್ಮೀಕ ನಾಯಕನ ಜೀವನದ ಅಂಗವಾಗಿದೆ.  ಪ್ರಾರ್ಥನೆಯು ನಮ್ಮ ಅಂತರ್ಯ ಮನುಷ್ಯನು ಬಲಗೊಳ್ಳುವ ಸಮಯವು ನಾವು ದೇವರ ಯೋಜನೆಗಳನ್ನು ಅರಿಯುವ ಸ್ಥಳವೂ ಆಗಿದೆ!(ಯೆಶಾಯ 40:31 ದಾನಿಯೆಲ 2:18-19) 
ಆದರೆ ಪ್ರಾರ್ಥನೆಯಲ್ಲಿ ಕ್ರಮ ಮತ್ತು ಶಿಸ್ತು ಅತ್ಯಗತ್ಯವಾದದ್ದು. ಕ್ರಮವಿಲ್ಲದ್ದು ಅಂದರೆ ಅಸಡ್ಡೆತನತನದ ಪರಮಾವಧಿ ಪ್ರಾರ್ಥನೆಯಲ್ಲಿ ನಿರಾಸಕ್ತರಾಗಿ ಶರೀರದ ಆಯಾಸವನ್ನೂ ಸಂದರ್ಭ ಸನ್ನಿವೇಶಗಳ ಕಾರಣಗಳನ್ನು ಹೇಳಿ ತನ್ನನ್ನು ತಾನೇ ವಂಚಿಸಿಕೊಳ್ಳುವದು, ಹೊರಗೆ ಸೇವೆಗಾಗಿ ಹೋಗುತ್ತಿದ್ದೇನೆ, ಮನೆಸಂಧಿಸಲು ಹೋಹುತ್ತಿದ್ದೇನೆ ಎಂದು ಪ್ರಾರ್ಥನೆಗೆಂದು ಮೀಸಲಾದ ಸಮಯದಲ್ಲಿ ಬೇರೆ ಕೆಲಸಗಳನ್ನು ಯೋಜಿಸಿಕೊಂಡು ದೇವರ ಕೆಲಸಕ್ಕಾಗಿಯೇ ಹೋಗುತ್ತಿದ್ದೇನೆ ಎಂದು ನೆಪಗಳನ್ನು ಹೇಳಿ ಅಸಡ್ಡೆ ಮಾಡುದಾದರೆ ನೀವು ನಿಮ್ಮೊಳಗಿರುವ ಅಗ್ನಿಯನ್ನು ಕಳೆದುಕೊಂಡು ದೇವರಿಗಾಗಿ ಪ್ರಕಾಶಿಸಲಾರದೆ ತಣ್ಣಗಾಗಿಬಿಡುವಿರಿ (ಹಿಂಜಾರಿ ಹೋಗುವಿರಿ) ನೆನಪಿರಲಿ ಅನುದಿನವು ನಿಮ್ಮನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿ ದೇವರ ಬಳಿಯಿಂದ ಆಲೋಚನೆ ಹೊಂದಿ ಅದರಂತೆ ನಡೆಯದಿದ್ದರೆ ನೀವು ದಾರಿತಪ್ಪಿ ನಿಮ್ಮ ಗುರಿಯನ್ನು ಕಳೆದುಕೊಳ್ಳುವದು ನಿಶ್ಚಯ (ರೋಮಾಪುರದವರಿಗೆ 12:1-2 )



Monday 28 October 2013

ಶರೀರ ಆರೋಗ್ಯಕ್ಕಾಗಿ ಪ್ರಾರ್ಥನೆ






ಕರುಣಾನಿಧಿಯಾದ ದೇವರೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ!
ನನ್ನ ಪ್ರಾಣ, ಆತ್ಮೆ, ಶರೀರಗಳನ್ನು ನಿನ್ನ ಸನ್ನಿಧಿಯಲ್ಲಿ ಸಮರ್ಪಿಸುತ್ತೇನೆ, ನನ್ನ ಶರೀರದ ಆರೋಗ್ಯಕ್ಕಾಗಿ  ಬೇಡಿಕೊಳ್ಳುತ್ತೇನೆ! ದೇವರೇ, ವ್ಯಾಧಿಗೆ ಕಾರಣವಾದದ್ದು ನನ್ನಲ್ಲಿರುವುದಾದರೆ ನನ್ನನು ಕ್ಷಮಿಸು, ನನ್ನ ಅಪರಾಧಗಳನ್ನು ಮನ್ನಿಸು!  ನನ್ನ ಶರೀರಲ್ಲಿ ಬಲವನ್ನೂ ಮನಸ್ಸಿನಲ್ಲಿ ನವಚೈತನ್ಯವನ್ನೂ ಅನುಗ್ರಹಿಸು!  ನಾನು ಜೀವದಿಂದಿದ್ದು ನಿನ್ನ ನಾಮವನ್ನು ಪ್ರಖ್ಯಾತಿಪಡಿಸುವಂತೆ ಕರುಣಿಸು!

ವ್ಯಾಧಿಯನ್ನೂ, ಬಲಹೀನತೆಯನ್ನೂ ತಿರಸ್ಕರಿಸುತ್ತೇನೆ! ವ್ಯಾಧಿಗೆ ನನ್ನಲ್ಲಿ ಸ್ಥಳವಿಲ್ಲ! ಈ ಶರೀರವು ಕ್ರಿಸ್ತಯೇಸುವಿನ ರಕ್ತದಿಂದ ಕ್ರಯಕ್ಕೆ ಕೊಳ್ಳಲ್ಪಟ್ಟಿರುವುದರಿಂದ ಬಲಹೀನತೆಗೆ ನನ್ನ ಶರೀರದ ಮೇಲೆ ಅಧಿಕಾರವಿಲ್ಲ! ಯೇಸುವಿನ ಗಾಯದಿಂದ ನಾನು ಗುಣವಾಗಿದ್ದೇನೆ! ವ್ಯಾಧಿಯು ನನ್ನದಲ್ಲ, ಬಲಹೀನತೆಯು ನನ್ನದಲ್ಲ, ಆರೋಗ್ಯವೂ, ಬಲವೂ ನನ್ನದು! ನನ್ನ ಕರ್ತನಾದ ಯೇಸುವೇ, ನನ್ನನ್ನು ಗುಣಪಡಿಸಿದ ನಿನ್ನ ಗಾಯಗಳಿಗಾಗಿ ನಿನಗೆ ವಂದನೆ, ಯೇಸುವಿನ ನಾಮದಲ್ಲಿ ಆರೋಗ್ಯವನ್ನೂ, ಬಲವನ್ನೂ ಹೊಂದಿಕೊಳ್ಳುತ್ತೇನೆ, ಆಮೇನ್!

"ಆತನು(ಯೇಸು)  ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು"(1 ಪೇತ್ರನು 2:24)

                                      ಮುಂದುವರಿಯುವುದು...,



Friday 25 October 2013

ಆತ್ಮೀಕ ಆಶೀರ್ವಾದಕ್ಕಾಗಿ ಪ್ರಾರ್ಥನೆ





ಕೃಪೆಯಲ್ಲಿ ಐಶ್ವರ್ಯವಂತನಾದ ದೇವರೇ, "ಆತನು ಪರಲೋಕದಲ್ಲಿನ ಸಕಲ ಆತ್ಮೀಯವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾನೆ" (ಎಫೆಸದವರಿಗೆ 1:3) ಎಂಬ ವಾಕ್ಯದ ಪ್ರಕಾರ ನನ್ನನ್ನು ಆಶೀರ್ವದಿಸು!
ನಿನ್ನ ವಿಷಯವಾದ ತಿಳುವಳಿಕೆಯನ್ನು ಕೊಟ್ಟು ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥಗಳನ್ನು ತಿಳಿದುಕೊಳ್ಳುವ ಜ್ಞಾನವುಳ್ಳ ಆತ್ಮವನ್ನು ನನಗೆ ದಯಪಾಲಿಸು! ನೀನು ನನ್ನ ಮನೋನೇತ್ರಗಳನ್ನು ಬೆಳಗಿಸಿ ದೇವರಾತ್ಮನ ಮೂಲಕ ಅಂತರ್ಯದಲ್ಲಿ ವಿಶೇಷ ಬಲಹೊಂದಿ ನಿನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಂತು ಅದರ ಅಗಲ ಉದ್ದ ಎತ್ತರ ಆಳ ಎಷ್ಟೆಂಬುದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲೂ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲು ಸಮರ್ಥನಾಗುವಂತೆ ನನಗೆ ಅನುಗ್ರಹಿಸು.

ಪ್ರೀತಿಸ್ವರೂಪನಾದ ದೇವರೇ ನಿನ್ನ ಪವಿತ್ರಾತ್ಮನ ಮೂಲಕ ನಿನ್ನ ಪ್ರೀತಿರಸವನ್ನು ಧಾರಾಳವಾಗಿ ನನ್ನ ಹೃದಯದಲ್ಲಿ ಸುರಿಸಬೇಕಾಗಿ.  ಈ ಭೂಮಿಯಲ್ಲಿ ನಿನ್ನ ಪರವಾಗಿ, ನಿನ್ನ ನಾಮದ ಮಹಿಮೆಗಾಗಿ ಜೀವಿಸುವಂತೆಯೂ, ಕಾರ್ಯಸಾಧಿಸುವಂತೆಯೂ, ನಿನ್ನ ಪ್ರವಿತ್ರಾತ್ಮನ ಫಲಗಳಿಂದಲೂ-ವಫ಼್ರಗಳಿಂದಲೂ ಸಮವಾಗಿ ನನ್ನನ್ನು ಆಶೀರ್ವದಿಸು! ಪವಿತ್ರಾತ್ಮನನ್ನು ಅನುಸರಿಸಿ ಶರೀರಭಾವವನ್ನು ಸಾಯಿಸಿ ದಿನದಿಂದ ದಿನಕ್ಕೆ ನಿನ್ನ ಹೋಲಿಕೆಗೆ ಸರಿಯಾಗಿ ರೂಪಾಂತರ ಹೊಂದಿ ನಿನಗೆ ಹೇರಳವಾದ ಫಲಕೊಡುವಂತೆಯೂ ನನಗೆ ಅನುಗ್ರಹಿಸು! ಯೇಸುವಿನ ನಾಮದಲ್ಲಿ ಬೇಡುತ್ತೇನೆ ಪರಲೋಕದ ತಂದೆಯೇ.., ಆಮೇನ್!


                                                                                     ಮುಂದುವರಿಯುವುದು...,

Sunday 20 October 2013

ಸಾಲ ಮತ್ತು ಕೊರತೆಗಳಿಂದ ಹೊರಬರಲು ಪ್ರಾರ್ಥನೆ



ಕೃಪೆಯಲ್ಲಿ ಐಶ್ವರ್ಯವಂತನಾದ ದೇವರೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ! ನನಗೆ ಸಹಾಯವು ಬರುವ ಪರ್ವತವಾದ ನಿನ್ನ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ, ದೇವರೇ ಇದುವರೆಗೂ ಕೊರತೆ\ಸಾಲವು ನನ್ನ ಜೀವಿತವನ್ನು ಆಳಲು ನಾನು ಅನುಮತಿಸಿದ್ದಕ್ಕಾಗಿ ನನ್ನನ್ನು ಕ್ಷಮಿಸು! ಹೃದಯದ ಆಲೋಚನೆಯಿಂದಲೂ, ಮಾತಿನಿಂದಲೂ ಕೊರತೆಗೆ \ ಸಾಲಕ್ಕೆ ಬಾಗಿಲು ತೆರೆದ ತಪ್ಪನ್ನು ಮನ್ನಿಸು! 

ನಿನ್ನ ಸನ್ನಿಧಿಯಲ್ಲಿ ಬೇಡಿಕೊಳ್ಳುವ ಈ ಸಮಯದಲ್ಲಿ ನನ್ನ ಎಲ್ಲಾ ಕೊರತೆಗಳು \ ಸಾಲಗಳು ಮಾರ್ಪಡಲಿ, ’ಕರ್ತನು ನನ್ನ ಕುರುಬನು ನಾನು ಕೊರತೆಪಡೆನು’ (ಕೀರ್ತನೆ 23:1)  ಎಂಬ ವಾಕ್ಯವು ನನ್ನ ಜೀವಿತದಲ್ಲಿ ನೆರವೇರಲೆ! ’ನಾನು ಐಶ್ವರ್ಯವಂತನಾಗಲು ಶಿಲುಬೆಯಲ್ಲಿ ನೀನು ಬಡವನಾದೆ’
 (2 ಕೊರಿಂಥದವರಿಗೆ 8:9) ಎಂಬ ಸತ್ಯವನ್ನು ಅಂಗೀಕರಿಸುತ್ತೇನೆ!

ಸಾಲ ಮತ್ತು ಕೊರತೆಗಳೋಂದಿಗೆ ನನ್ನ ಒಪ್ಪಂದಗಳನ್ನು ರದ್ದು ಮಾಡುತ್ತೇನೆ! ಇನ್ನು ಸಾಲ ಕೊರತೆಯಲ್ಲಿ ಮುಂದುವರಿಯಲು ನಾನು ತಯಾರಿಲ್ಲ, ಸಾಲ \ ಕೊರತೆಗಳನ್ನು ಮನ:ಪೂರ್ವಕವಾಗಿ ತ್ಯಜಿಸುತ್ತೇನೆ!

ಕ್ರಿಸ್ತಯೇಸುವಿನಲ್ಲಿ ಉಂಟಾಗಿರುವ ಅಬ್ರಹಾಮನ ಸಕಲ ಆಶೀರ್ವಾದದೊಳಗೆ ನಾನು ಮನ:ಪೂರ್ವಕವಾಗಿ ಪ್ರವೇಶಿಸುತ್ತೇನೆ! (ಗಲಾತ್ಯದವರಿಗೆ 3:13)

ನನ್ನ ಆದಾಯದಿಂದಲೂ, ನನ್ನ ದುಡಿಮೆಯ ಪರಿಶ್ರಮದಿಂದಲೂ ದೇವರನ್ನು ಮಹಿಮೆಪಡಿಸುತ್ತೇನೆ! ಆದದ್ದರಿಂಡ ಇಂದಿನಿಂದ ನನ್ನ ಕೈಗಳು ಆಶೀರ್ವದಿಸಲ್ಪಟ್ಟ ಕೈಗಳೂ ನನ್ನ ಆದಾಯವು ನನ್ನ ಅಗತ್ಯಕ್ಕಿಂತ ಹೆಚ್ಚಿನದೂ ಆಗಿದೆ!

ನನ್ನ ಅಗತ್ಯತೆಗಳನ್ನು ಸಂದಿಸುವ ಯೆಹೋವಯೀರೆ ನಿನಗೆ ವಂದನೆ! ಐಶ್ವರ್ಯವನ್ನು ಸಂಪಾದಿಸಲು ಬೇಕಾದಬಲವು ನಿನ್ನಿಂದ ನನಗೆ ಒದಗಿಬರಲಿ, ಯೇಸುವಿನ ನಾಮದಲ್ಲಿ ಬೇಡುತ್ತೇನೆ ಪರಲೋಕದ ತಂದೆಯೇ, ಆಮೇನ್!

"ನನ್ನ ದೇವರು ಕ್ರಿಸ್ತಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು" (ಫಿಲಿಪ್ಪಿಯರಿಗೆ 4:19)

                                                                                                          ಮುಂದುವರಿಯುವದು...,

ಪರಿಶುದ್ಧ ಜೀವಿತಕ್ಕಾಗಿ ಪ್ರಾರ್ಥನೆ

ಪರಿಶುದ್ಧ ಜೀವಿತಕ್ಕಾಗಿ ಪ್ರಾರ್ಥನೆ

ಪರಿಶುದ್ಧನಾದ ದೇವರೇ, ನಿನ್ನ ಪರಿಶುದ್ಧವಾದ ನಮಮ್ಕ್ಕೆ ಮಹಿಮೆ ಉಂಟಾಗಲಿ! ನಾನು ಪರಿಶುದ್ಧನಾಗಿ ಜೀವಿಸಬೇಕೆಂಬ ನಿನ್ನ ಚಿತ್ತಕ್ಕೆ ನನ್ನನ್ನು ಸಮರ್ಪಿಸುತ್ತೇನೆ,  ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣಲಾರರು (ಇಬ್ರಿಯರಿಗೆ 12:15) ಎಂಬ ವಾಕ್ಯದಂತೆ ನನ್ನನ್ನು ಶುದ್ಧೀಕರಿಸಲು ಒಪ್ಪಿಸಿಕೊಡುತ್ತೇನೆ!  ನಾನು ನನ್ನ ಹೃದಯದ ಆಲೋಚನೆಯಿಂಡಲೂ, ಮನಸ್ಸಿನ ಭಾವನೆಯಿಂದಲೂ, ನನ್ನ ನಡೆ-ನುಡಿ, ಕ್ರಿಯೆಗಳಿಂದ ಅಂತರಂಗವಾಗಿಯೂ-ಬಹಿರಂಗವಾಗಿಯೂ ಮಾಡಿದ ಎಲ್ಲಾ ಪಾಪಗಳನ್ನು ಮನ್ನಿಸಿ ಸಕಲ ಅನೀತಿಯನ್ನೂ ಪರಿಹರಿಸಬೇಕಾಗಿ ಪ್ರಾರ್ಥಿಸುತ್ತೇನೆ, ನಿನ್ನ ಮಹಾ ಪರಿಶುದ್ಧಸ್ಥಳದಲ್ಲಿ ನಿನ್ನ ಮಹಿಮೆಯನ್ನು ನಾನು ಕಾಣುವಂತೆ ನನ್ನನ್ನು ಯೋಗ್ಯನನ್ನಾಗಿ ಮಾರ್ಪಡಿಸು! ನೀನು ಯಾವ ದೋಷವೂ ಇಲ್ಲದವನಾಗಿರುವಂತೆ ನನ್ನನ್ನೂ ದೋಷವಿಲ್ಲದವನನ್ನಾಗಿ ಪರಿವರ್ತಿಸು. (ಮತ್ತಾಯ 5:48)  ಪರಿಸುದ್ಧತೆಗೆ ವಿರೋಧವಾಗಿ ನಾನು ಮಾಅಡಿದ ತೀರ್ಮಾನಗಳನ್ನು ಕೆಡವಿ ಹಾಕುತ್ತೇನೆ! ಇಹಲೋಕ ಸ್ನೇಹದೊಂದಿಗೂ, ಶರೀರಭಾವದೊಂದಿಗೂ ನಾನು ಮಾಡಿಕೊಂಡ ಒಡಂಬಡಿಕೆಗಳನ್ನು ರದ್ದುಗೊಳಿಸುತ್ತೇನೆ! ಪರಿಶುದ್ಧ ಮಾರ್ಗದಲ್ಲಿ ಮುನ್ನಡೆಯಂತೆ ನನ್ನನ್ನು ಅನರ್ಹಗೊಳಿಸುವಂತವುಗಳನ್ನು ನನ್ನ ಆಲೋಚನೆಯಿಂದ, ಶಾರೀರಿಕ ಮತ್ತು ಆತ್ಮೀಕ ಜೀವಿತದಿಂದ ಬಹಿಷ್ಕರಿಸುತ್ತೇನೆ!  ಭೂಮಿಯಲ್ಲಿ ಜೀವಿಸುವ ದಿನವೆಲ್ಲಾ ನಿನಗೆ ಸಾಕ್ಷಿಯಾಗಿ ಬಾಳಲು, ಭೂಮಿಗೆ ಉಪ್ಪಾಗಿ ರುಚಿಕೊಡಲು-ಲೋಕಕ್ಕೆ ಬೆಳಕಾಗಿ ಬೆಳಗಲು ನನ್ನನ್ನು ಸಮ್ರ್ಪಿಸುತ್ತೇನೆ! ನನ್ನ ಪಾಪ ಪರಿಹಾರಕ್ಕಾಗಿ ಸುರಿಸಲ್ಪಟ್ಟ ಯೇಸುವಿನ ರಕ್ತದಿಂದಲೂ, ಜೀವವನ್ನುಂಟುಮಾಡುವ ನಿನ್ನ ವಾಕ್ಯದಿಂದಲೂ ನನ್ನನ್ನು ಶುದ್ಧೀಕರಿಸು ನಿನಗೆ ಉಪಯೋಗವಾಗುವ ಪರಿಶುದ್ಧ ಪಾತ್ರೆಯಾಗಿ ರೂಪಿಸು- ಉಪಯೋಗಿಸು! ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇನೆ ಪರಲೋಕದ ತಂದೆಯೇ, ಆಮೇನ್!



ಮುಂದುವರಿಯುವುದು...,

Saturday 19 October 2013

ಮಕ್ಕಳಿಗಾಗಿ ಪ್ರಾರ್ಥನೆ

ಮಕ್ಕಳಿಗಾಗಿ ಪ್ರಾರ್ಥನೆ



ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ! ಯೇಸುವೇ, ನೀನು ನಮಗೆ ಅನುಗ್ರಹಿಸಿದ ಸಂತಾನಕ್ಕಾಗಿ ನಿನಗೆ ವಂದನೆ! ನೀನು ನಮಮ್ನ್ನು ನಂಬಿಗಸ್ತರು ಎಂದು ಎಣಿಸಿ ನಮ್ಮ ಕರಗಳಲ್ಲಿ ನೀಡಿರುವ ಮಕ್ಕಳಿಗಾಗಿ ನಿನ್ನ ಸಮ್ಮುಖದಲ್ಲಿ ಪ್ರಾರ್ಥಿಸುತ್ತೇವೆ. ಕರ್ತನೇ ನಮ್ಮ ಮಕ್ಕಳನ್ನು ಆಶೀರ್ವದಿಸು, ಅವರು ನಿನ್ನನ್ನು ಅರಿತು ಆಸಕ್ತಿಯಿಂದ ನಿನ್ನ ಮಾರ್ಗವನ್ನು ಅನುಸರಿಸುವಂತೆ ನಿನ್ನ ಮುಖ ಪ್ರಸನ್ನತೆ ಅವರ ಮೇಲಿರಲಿ! ನಿನ್ನ ಮಕ್ಕಳು ಎಣ್ಣೆಮರದ ಸಸಿಗಳಂತಿರುವರು" ಎಂಬ ವಾಕ್ಯದ ಪ್ರಕಾರ ಇವರು ನಿನ್ನ ಅಂಗಳದಲ್ಲಿ ನೆಡಲ್ಪಟ್ಟು ಈ ಭೂಮಿಯಲ್ಲಿ ನಿನಗೆ ಹೇರಳವಾದ ಫಲಕೊಡುವಂತೆ ನಿನ್ನ ವಾಕ್ಯದ ಅಸ್ತಿವಾರದ ಮೇಲೆ ಇವರ ಜೀವಿತವು ಕಟ್ಟಲ್ಪಡಲಿ, ಕರ್ತನೇ ಸಕಲ ಜ್ಞಾನವಿವೇಕಗಳು ಇವರಿಗೆ ಉಂಟಾಗುವಂತೆ ದೇವಭಯವು ಇವರ ಹೃದಯವನ್ನು ಆಳ್ವಿಕೆಮಾಡಲಿ, ಯೌವ್ವನ ಪ್ರಾಯದಲ್ಲಿ ಮಾರ್ಗತಪ್ಪಿ ಹೋಗದಂತೆ ಪರಿಶುದ್ದತೆಯನ್ನು ಕಳೆದುಕೊಳ್ಳದಂತೆ ಬೇಲಿಯಿಟ್ಟು ಕಾಯಬೇಕಾಗಿ ಪ್ರಾರ್ಥಿಸುತ್ತೇವೆ. ನಿನ್ನನ್ನು ಸೇವಿಸುವದರಲ್ಲಿ ನಾವೇ ಅವರಿಗೆ ಮಾದರಿಯಾಗಿರುವಂತೆ, ನಿನ್ನಲ್ಲಿ ಭರವಸೆಯಿಟ್ಟು ಕೆಟ್ಟದ್ದನ್ನು ತೊರೆದು ಸನ್ಮಾರ್ಗದಲ್ಲಿ ನಡೆಯುವವರು ಹೊಂದುವ ಪ್ರತಿಫಲಕ್ಕೆ ನಾವೇ ಅವರಿಗೆ ಸಾಕ್ಷಿಯಾಗಿರುವಂತೆ ನಮಗೆ ಕೃಪೆಯನ್ನು ಅನುಗ್ರಹಿಸು! ಕರ್ತನೇ ಅವರ ಭವಿಷ್ಯವು ನಮ್ಮ ಹೃದಯ ಬಯಕೆಯಂತೆಯೋ ಅವರ ಸ್ವಂತ ಆಲೋಚನೆಯಂತೆಯೋ ಇಲ್ಲದೆ ಸಂಪೂರ್ಣವಾಗಿ ನಿನ್ನ ಚಿತ್ತದಂತೆಯೇ ರೂಪಿತವಾಗಲಿ. ನಿನ್ನ ನಿರೀಕ್ಷೆಯನ್ನು ಭಂಗಪಡಿಸಿ ನಿನ್ನ ಮಾರ್ಗದಿಂದ ಇವರನ್ನು ದಿಕ್ಕುತಪ್ಪಿಸಲು ಪ್ರಯತ್ನಿಸುವ ಸೈತಾನನ ಪ್ರಯತ್ನಗಳನ್ನು ಶಪಿಸುತ್ತೇವೆ! ಸೈತಾನನ ಕುತಂತ್ರಗಳು ನಾಶವಾಗಲಿ! ನಿನ್ನ ಮಾರ್ಗದಲ್ಲಿ ಮುಂದುವರೆಯದಂತೆ ತಡೆಮಾಡುವ ಮನುಷ್ಯ ಸಹವಾಸಗಳು, ದೈವೀಕ ಚಿತ್ತವಿಲ್ಲದೆ ಆತ್ಮೀಕ ಬಂಧುಗಳು ಕಡಿಯಲ್ಪಡಲಿ. ನಿನ್ನ ಚಿತ್ತಕ್ಕೆ ವಿರೋಧವಾದ ಕಾರ್ಯಗಳನ್ನು ನಮ್ಮ ಮಕ್ಕಳ ಜೀವಿತದಲ್ಲಿ ನಾವು ನಿರಾಕರಿಸುತ್ತೇವೆ! ಅವುಗಳನ್ನು ನಾವು ಅನುಮತಿಸುವುದಿಲ್ಲ! ಕರ್ತನೇ ನಮ್ಮ ಮಕ್ಕಳು ಆತ್ಮೀಕವಾಗಿಯೂ, ಶಾರೀರಿಕವಾಗಿಯೂ,

ಸಾಮಾಜಿಕವಾಗಿಯೋ ,ಆರ್ಥಿಕವಾಗಿಯೂ, ರಾಜಕೀಯವಾಗಿಯೂ ಅಭಿವೃದ್ಧಿ ಹೊಂದಿ ಈ ಭೂಮಿಯಲ್ಲಿ ನಿನ್ನ ನಾಮವನ್ನು ಮಹಿಮೆಪಡಿಸುವವರಾಗಿಯೂ ನಿನಗೆ ಸಾಕ್ಷಿಗಳಾಗಿಯೂ ಜೀವಿಸುವಂತೆ ಅನುಗ್ರಹಿಸು! ನಮ್ಮ ಮಕ್ಕಳ ವಿದ್ಯಾಭ್ಯಾಸವನ್ನೂ / ದುಡಿಮೆಯ ಪ್ರಯತ್ನಗಳನ್ನು ಆಶೀರ್ವದಿಸು, ಆರೋಗ್ಯವನ್ನೂ, ಬಲವನ್ನೂ ನಿನ್ನ ಚಿತ್ತವನ್ನು ಭೂಮಿಯಲ್ಲಿ ಪೂರ್ಣಗೊಳಿಸುವವರೆಗೂ ದೀರ್ಘಾಯುಷ್ಯವನ್ನೂ ಅನುಗ್ರಹಿಸು. ನಮ್ಮ ಪ್ರಾರ್ಥನೆಗಳನ್ನು ಕೇಳಿ ನಮ್ಮ ಮಕ್ಕಳನ್ನು ಆಶೀರ್ವದಿಸಿದ್ದಕ್ಕಾಗಿ ನಿನಗೆ ವಂದನೆ! ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇವೆ ಪರಲೋಕದ ತಂದೆಯೇ.., ಆಮೇನ್!

ಮುಂದುವರಿಯುವುದು...,

ಕುಟುಂಬದವರ ರಕ್ಷಣೆಗಾಗಿ ಪ್ರಾರ್ಥನೆ

ಕುಟುಂಬದವರ ರಕ್ಷಣೆಗಾಗಿ ಪ್ರಾರ್ಥನೆ



"ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತೆ 

ಮೋಟುಗೈಯಲ್ಲ"

                                                             ಯೆಶಾಯ 59:1

ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ! ಯೇಸುವೇ, ನಮ್ಮ ಕುಟುಂಬದ ಸದಸ್ಯರೆಲ್ಲರನ್ನೂ ನಿನ್ನ ಕೃಪೆಯ ಹಸ್ತದಲ್ಲಿ ಒಪ್ಪಿಸಿಕೊಡುತ್ತೇನೆ, ಕುಟುಂಬದಲ್ಲಿರುವ ಪ್ರತಿಯೊಬ್ಬರನ್ನೂ ರಕ್ಷಿಸುವಂತೆ ಪ್ರಾರ್ಥಿಸುತ್ತೇನೆ, ನಿನ್ನ ಅಮೂಲ್ಯವಾದ ರಕ್ಷಣೆಯನ್ನು ನನಗೆ ಅನುಗ್ರಹಿಸಿದಿಯಲ್ಲಾ!  ಎಲ್ಲಾ ಮನುಷ್ಯರೂ ರಕ್ಷಿಸಲ್ಪಡುವದು ನಿನ್ನ ಚಿತ್ತವಾಗಿರುವದರಿಂದ ನನ್ನ ಕುಟುಂಬವನ್ನೂ ರಕ್ಷಿಸು.  "ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೇ ಹೊಂದುವಿ ನಿನ್ನ ಮನೆಯವರೂ ರಕ್ಷಣೇಹೊಂದುವರು" ಎಂಬ ವಾಕ್ಯದ ಪ್ರಕಾರ ನನ್ನ ಕುಟುಂಬವನ್ನು ಕರುಣಿಸು!  ರಕ್ಷಣೆಯನ್ನು ಅನುಗ್ರಹಿಸು! ಪಾಪಿಗಳನ್ನು ಹುಡುಕಿ ರಕ್ಷಿಸಲು ಬಂದಾತನೇ, ನೀನೇ ರಕ್ಷಕನೆಂದು ಅರಿತುಕೊಳ್ಳುವಂತೆ ನಮ್ಮ ಕುಟುಂಬದವರ ಮನೋನೇತ್ರಗಳನ್ನು ತೆರೆ, ಪಾಪಗಳು ಕ್ಷಮಿಸಲ್ಪಡಲು ಶಿಲುಬೆಯಲ್ಲಿ ರಕ್ತವನ್ನು ಸುರಿಸಿದಾತನೇ, ಇವರನ್ನು ಕ್ಷಮಿಸು, ಇವರ ಪಾಪಗಳಿಂದಲೂ, ಶಾಪಗಳಿಂದಲೂ ಬಿಡಿಸು, ನಿನ್ನನ್ನು ರಕ್ಷಣೆ ಹೊಂದದಂತೆ ತಡೆಮಾಡುವ ಸಕಲ ಅಡ್ಡಿಗಳು ಅವರ ಆಲೋಚನೆಗಳನ್ನೂ, ಶರೀರವನ್ನೂ, ಜೀವಿತವನ್ನೂ ಬಿಟ್ಟು ಹೊರಹೋಗಲಿ! ರಕ್ಷಣೆಯ ಸಂತೋಷವು ಅವರ ಹೃದಯದಲ್ಲಿ ಉಂಟಾಗಲು ಮಾರ್ಗಗಳು ತೆರೆಯಲ್ಪಡಲಿ! ಸೈತಾನನ ಸಿಂಹಾಸನಗಳು ಕೆಡವಲ್ಪಟ್ಟು ನಿನ್ನ ಪರಲೋಕ ರಾಜ್ಯವು ಅವರ ಹೃದಯದಲ್ಲಿ ಸ್ಥಾಪಿಸಲ್ಪಡಲಿ! ನಿನ್ನ ಚಿತ್ತ ಅವರ ಮುಖಾಂತರ ಈ ಭೂಮಿಯಲ್ಲಿ ಪರಿಪೂರ್ಣಗೊಳ್ಳಲಿ.  ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನಿನಗೆ ವಂದನೆ.  ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇನೆ ಪರಲೋಕದ ತಂದೆಯೇ, ಆಮೇನ್!


                                                                      ಮುಂದುವರಿಯುವುದು...,

ರಾತ್ರಿ ಕುಟುಂಬ ಪ್ರಾರ್ಥನೆ

ರಾತ್ರಿ ಕುಟುಂಬ ಪ್ರಾರ್ಥನೆ





ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ!

ದೇವರೇ, ಈ ರಾತ್ರಿ ವೇಳೆಯಲ್ಲಿ ನಾವು ಕುಟುಂಬವಾಗಿ ನಿನ್ನ ಸಮ್ಮುಖದಲ್ಲಿ ಬಂದೆದ್ದೇವೆ. 
ಬೆಳಗ್ಗೆಯಿಂದ ಈ ಸಮಯದವರೆಗೂ ನಮ್ಮನ್ನು ಪೋಷಿಸಿ-ಪರಾಂಬರಿಸಿ ಆರೋಗ್ಯವನ್ನೂ, ಬಲವನ್ನೂ ಅನುಗ್ರಹಿಸಿದ್ದಕ್ಕಾಗಿ ನಿನಗೆ ವಂದನೆ!

          ಈ ದಿನದಲ್ಲಿಯೂ ನಮ್ಮನ್ನು ಎಲ್ಲಾ ಆಪತ್ತು-ವಿಪತ್ತುಗಳಿಗೆ ತಪ್ಪಿಸಿ ನಮ್ಮ ಎಲ್ಲಾ
ಕೆಲಸ ಕಾರ್ಯಗಳನ್ನು ಆಶೀರ್ವದಿಸಿದ್ದಕ್ಕಾಗಿಯೂ, ನೀನು ನಮಗೆ ಮಾಡಿದ ಸಕಲ ಉಪಕಾರಗಳಿಗಾಗಿಯೂ ನಿನಗೆ ಸ್ತೋತ್ರ! ನಮ್ಮ ರಕ್ಷಕನಾದ ಯೇಸುವೇ, ನಾವು ಕುಟುಂಬವಾಗಿ ನಮ್ಮನೇ ನಿನ್ನ ಕರಗಳಲ್ಲಿ ಸಮರ್ಪಿಸುತ್ತೇವೆ, ಇಂದು ನಾವು ಅರಿತೋ-ಅರಿಯದೆಯೋ ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಮನ್ನಿಸು! ಯೇಸುವೇ ನಿನ್ನ ರಕ್ತದಿಂದ ನಮ್ಮನ್ನು ಶುದ್ಧೀಕರಿಸು. 

          ತಂದೆಯಾದ ದೇವರೇ, ಈ ರಾತ್ರಿವೇಳೆಯಲ್ಲಿ ನಮ್ಮ ಪ್ರತಿಯೊಬ್ಬರ ಮೇಲೆ ನಿನ್ನ ಕಾಪಾಡುವಿಕೆ ಉಂಟಾಗಲಿ! ಕೆಟ್ಟ ಆಲೋಚನೆಗಳೋ, ಕೆಟ್ಟಸ್ವಪ್ನಗಳೋ ನಮ್ಮನ್ನು ಸಮೀಪಿಸದಂತೆ ಸೈತಾನನ ಕುತಂತ್ರಗಳು ಲಯವಾಗಲಿ! ನಮ್ಮ ಮನೆಯ ಸುತ್ತಲು ನಿನ್ನ ಅಗ್ನಿಯ ದೂತರನ್ನು ಕಾವಲಿರಿಸು, ನಾವು ಸಮಾಧಾನದಿಂದ ನಿದ್ರಿಸಿ ಮುಮ್ಜಾನೆ ಎದ್ದು ನಿನ್ನ ಸಮ್ಮುಖದಲ್ಲಿ ಕುಟುಂಬವಾಗಿ ನಿಂತುಕೊಳ್ಳಲು ಕೃಪೆಯನ್ನು ಅನುಗ್ರಹಿಸು, ನಮ್ಮ ಪ್ರಾರ್ಥನೆಗಳನ್ನು ಕೇಳಿದ್ದಕ್ಕಾಗಿ
ನಿನಗೆ ವಂದನೆ. ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇವೆ ಪರಲೋಕದ ತಂದೆಯೇ, ಆಮೇನ್.
                                                                 ಮುಂದುವರಿಯುವುದು...,

"ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು;
ನಿನ್ನ ಪ್ರಾಣವನ್ನು ಕಾಯುವನು.  ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು" 
                                         ಕೀರ್ತನೆಗಳು 127:7,91:10

ªÀÄÄAzÀĪÀjAiÀÄĪÀÅzÀÄ.,

ಮುಂಜಾನೆಯ ಕುಟುಂಬ ಪ್ರಾರ್ಥನೆ

ಮುಂಜಾನೆಯ ಕುಟುಂಬ ಪ್ರಾರ್ಥನೆ


"ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವದು; ಉದಯಕಾಲದಲ್ಲಿಯೇ ಪ್ರಾರ್ಥನೆಯನ್ನು ಸಮರ್ಪಿಸಿ ಸದುತ್ತರವನ್ನು ಎದುರು ನೋಡುತ್ತಿರುವೆನು" (ಕೀರ್ತನೆಗಳು5:3)

ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ! ದೇವರೇ, ಈ ಮುಂಜಾನೆ ವೇಳೆಯಲ್ಲಿ ನಾವು ಕುಟುಂಬವಾಗಿ ನಿನ್ನ ಸಮ್ಮುಖದಲ್ಲಿ ಬರಲು ನೀನು ಅನುಗ್ರಹಿಸಿದ ಕೃಪೆಗಾಗಿ ನಿನಗೆ ವಂದನೆ!  ಕಳೆದ ದಿನವೆಲ್ಲಾ ನಮ್ಮ ಕುಟುಂಬದಲ್ಲಿರುವ ಎಲ್ಲರನ್ನೂ ಕಣ್ಮಣಿಯ ಹಾಗೆ ಕಾದು ನಮ್ಮ ಅನ್ನ, ಪಾನಗಳನ್ನು ಆಶೀರ್ವದಿಸಿ ಸಕಲ ವ್ಯಾಧಿಗಳಿಗೆ ನಮ್ಮನ್ನು ದೂರಮಾಡಿದ್ದಕ್ಕಾಗಿ ನಿನಗೆ ಸ್ತೋತ್ರ!
ನಮ್ಮ ಪ್ರರಿಶ್ರಮವನ್ನೂ, ದುಡಿಮೆಯನ್ನೂ ಆಶೀರ್ವದಿಸಿದ್ದಕ್ಕಾಗಿ ನಿನಗೆ ವಂದನೆ!

ದೇವರೇ, ನೀನು ದಯಪಾಲಿಸಿದ ಈ ನೂತನ ದಿನದಲ್ಲಿ ನಮ್ಮನ್ನು ಆಶೀರ್ವದಿಸಬೇಕಾಗಿ ಪ್ರಾರ್ಥಿಸುತ್ತೇವೆ.  ಈ ದಿನ ಸಂಪೂರ್ಣವಾಗಿ ನಿನ್ನ ಆಳ್ವಿಕೆ ನಮ್ಮ ಮೇಲಿರಲಿ, ನಾವು ನಡೆಯಬೇಕಾದ ಮಾರ್ಗವನ್ನು ನಮಗೆ ಬೋಧಿಸು, ನಮ್ಮ ಕೆಲಸಕಾರ್ಯಗಳ ಮೇಲೆ ನಿನ್ನ ಹತೋಟಿಯಿರಲಿ, ನಮ್ಮ 
ಪ್ರಯತ್ನಗಳನ್ನು ಆಶೀರ್ವದಿಸು.

ನಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸಲು ಬೇಕಾದ ಜ್ಞಾನ, ವಿವೇಕಗಳನ್ನು ಅನುಗ್ರಹಿಸು, ಆರೋಗ್ಯವನ್ನೂ, ಬಲವನ್ನೂ ದಯಪಾಲಿಸು, ನಮ್ಮ ಮೇಲೂ ನಮ್ಮ ಪರಿವಾರದ ಮೇಲೂ ನಿನ್ನ ದೈವೀಕ ಕಾಪಾಡುವಿಕೆ ಉಂಟಾಗಲಿ! ಸೈತಾನನ ಕುತಂತ್ರಗಳು ಲಯವಾಗಲಿ,  ನಿನ್ನ ಮುಖ ಪ್ರಸನ್ನತೆ ನಮ್ಮ ಮೇಲಿರಲಿ, ನಿನ್ನ ಸಮಾಧಾನದಿಂದ ನಮ್ಮ ಹೃದಯಗಳು ತುಂಬಿರಲಿ!
ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇವೆ ನಮ್ಮ ಪರಲೋಕದ ತಂದೆಯೇ, ಆಮೇನ್.
  
     ಮುಂದುವರಿಯುವುದು..., 

ಪ್ರಾರ್ಥನೆಯ ಸಮಯ

ಪ್ರಾರ್ಥನೆಯ ಸಮಯ


          ನಮ್ಮ ಕರ್ತನಾದ ಯೇಸುಕ್ರಿಸ್ತನ ನಾಮದಲ್ಲಿ ಪ್ರೀತಿಯ ಶುಭಾಶಯಗಳು! ಕ್ರಿಸ್ತಯೇಸುವಿನ ಅಮೂಲ್ಯವಾದ ಕೃಪೆಯಿಂದ "ಪ್ರಾರ್ಥನೆ" ಎಂಬ ಬ್ಲಾಗ್ ಆನ್ನು ಪರಿಚಯಿಸುತ್ತಿದ್ದೇವೆ.

          ಯೇಸುಕ್ರಿಸ್ತನನ್ನು ಅರಿತವರು ಹಾಗೂ ಅಂಗೀಕರಿಸಿದವರು ತಮ್ಮ ಕುಟುಂಬದ ಆಶೀರ್ವಾದಗಳಿಗಾಗಿ ಹೇಗೆ ಪ್ರಾರ್ಥಿಸಬೇಕೆಂಬುದನ್ನು ಕಲಿಯಲು ಕ್ರ್ಲವಿ ಮಾದರಿ ಪ್ರಾರ್ಥನೆಗಳನ್ನು ರಚಿಸಲಾಗಿದೆ.ಈ ಪ್ರಾರ್ಥನೆಯ ಮಾದರಿಯನ್ನು ಅನುಸರಿಸಿ ನೀವು ನಿಮ್ಮ ಕುಟುಂಬಕ್ಕಾಗಿ ವೈಯಕ್ತಿಕವಾಗಿ ದೇವರ ಸಮ್ಮುಖದಲ್ಲಿ ಪ್ರಾರ್ಥಿಸಲು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ದೇವರ ಬಳಿಯಿಂದ ಸಹಾಯವೂ, ಆಶೀರ್ವಾದವೂ ನಿಮ್ಮ ಕುಟುಂಬಕ್ಕೆ ಒದಗಿಬರಲಿ. ಆಮೇನ್.

ಮುಂದುವರಿಯುವುದು...,