ಆತ್ಮೀಯರೇ,
ಮಾದರಿ ಪ್ರಾರ್ಥನೆಗಳು ನಿಮಗೂ ದೇವರಿಗೂ ನಡುವೆ ನೇರ ಸಂಪರ್ಕವನ್ನು ಸಾಧಿಸುವಲ್ಲಿ ನಿಮಗೆ ಸಹಾಯ ಮಾಡಿದೆ ಎಂದು ನಂಬುತ್ತೇವೆ.
ಈ ಎರಡನೆಯ ಭಾಗವು 1ತಿಮೊಥೆಯನಿಗೆ 2:1-4 ನೇ ವಚನದಿಂದ ಪ್ರಾರಂಭವಾಗುತ್ತದೆ " ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. ಹಾಗೆ ಮಾಡುವದು ನಮ್ಮಾ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ." ಹೌದು ದೇವರ ಚಿತ್ತವನ್ನು ನೆರವೇರಿಸಲೆಂದೇ ನಾವು ಈ ಭೂಮಿಯಲ್ಲಿ ಇಡಲ್ಪಟ್ಟು ಕೃಪೆಯಿಂದ ರಕ್ಷಿಸಲ್ಪಟ್ಟಿದ್ದೇವೆ.
ಆದರೆ ಇದನ್ನು ಮಾಡಲು ನಮ್ಮ ಆತ್ಮಸಮರ್ಪಣೆ ಅನಿವಾರ್ಯವಾಗಿದೆ ! ಹೌದು ದೀಪವು ತನ್ನಲ್ಲಿರುವದನ್ನು ಕೊಡದಿದ್ದರೆ ಬೆಳಗಲಾರದು - ಉಪ್ಪು ನೀರಿನಲ್ಲಿ ಕರಗದಿದ್ದರೆ ರುಚಿಕೊಡಲಾರದು.(ಮತ್ತಾಯ 5:13-14)
ಈ ಲೋಕಕ್ಕೆ ಬೆಳಕಾಗಿಯೂ ಭೂಮಿಗೆ ಉಪ್ಪಾಗಿಯೂ ಕರೆಯಲ್ಪಟ್ಟಿರುವ ನೀವು ನಿಮ್ಮ ಸ್ವಹಿತವನ್ನು ತ್ಯಜಿಸಿ ದೇವರಿಗೆ ನಿಮ್ಮ ಸಂಪೂರ್ಣ ಜೀವಿತವನ್ನೂ ಹೃದಯದಲ್ಲಿ ಪ್ರಥಮಸ್ಥಾನವನ್ನೂ ಕೊಡದಿದ್ದರೆ ಹೇಗೆ ಬೆಳಕಾಗಿಯೂ-ಉಪ್ಪಾಗಿಯೂ ಇರಲು ಸಾಧ್ಯ ? ಆದ್ದರಿಂದ ಈ ಮಧ್ಯಸ್ಥಿಕೆಯ ಪ್ರಾರ್ಥನೆಗೆ ನಿಮ್ಮ ಸಮರ್ಪಣಾ ಜೀವಿತದ ಕ್ರಯಸಲ್ಲಿಸುವಿಕೆ ಅತ್ಯಾವಶ್ಯವಾಗಿದೆ.
ಯಾಕೆಂದರೆ ದೇವರಿಂದ ಕೇಳಿ ಪಡೆಯಲು ನಾವು ಹಕ್ಕುಳ್ಳವರಾಗಿದ್ದೇವೆ ಆತನು ನಮ್ಮ ತಂದೆಯೂ ನಾವು ಆತನ ಮಕ್ಕಳೂ ಆಗಿರುವದರಿಂದ ಈ ಹಕ್ಕು ನಮಗುಂಟು ! ಆದರೆ ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿ ನಾವು ನಮಗಾಗಿ ಅಲ್ಲ ಬೇರೆಯವರ ಪರವಾಗಿ ದೇವರ ಸಮ್ಮುಖದಲ್ಲಿ ನಿಂತು ಪಾತ್ರರಲ್ಲದವರನ್ನು ಪಾತ್ರರನ್ನಾಗಿಸುವಂತೆ ದೇವರ ಕರುಣೆಗಾಗಿ ಬೇಡುವವರಾಗಿಯೂ - ಬಂಧನದಲ್ಲಿರುವವರ ಕಟ್ಟುಗಳನ್ನು ಬಿಚ್ಚಲು ಶತ್ರುವಿನೊಂದಿಗೆ ಹೋರಾಡಲು ಮುಂದುವರೆಯುತ್ತಿದ್ದೇವೆ ! ಆದರೆ ಇದಕ್ಕೆ ನಮಗೆ ಕೆಲವು ಅರ್ಹತೆ ಮತ್ತು ಅಧಿಕಾರದ ತಿಳುವಳಿಕೆಯ ಅಗತ್ಯವಿದೆ.
ಅದನ್ನು ತಿಳಿಯುವ ಮೊದಲು ಕೆಲವು ತಡೆಗಳನ್ನು ದಾಟಿ ಮುಂದೆ ಹೋಗುವ;
ಈ ಸತ್ಯವನ್ನು ಅರಿಯದವರು ಇದು ದೇವರಿಂದ ಬಂದದ್ದಲ್ಲವೆಂದೂ ಮನುಷ್ಯ ಕಲ್ಪನೆಯೆಂದೂ ವಿವಾದಿಸಬಹುದು ಆದರೆ ದೇವರವಾಕ್ಯವು 1ಪೇತ್ರನು 2:9 ರಲ್ಲಿ " ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕಿಯ ಪ್ರಜೆಯೂ ಆಗಿದ್ದೀರಿ." ಎಂದು ಬರೆದದೆ. ದೇವರು ನಮ್ಮ ಪ್ರತಿಯೊಬ್ಬರನ್ನೂ ರಾಜರನ್ನಾಗಿಯೂ ಯಾಜಕರನ್ನಾಗಿಯೂ ಕರೆದಿರುವದರಿಂದ ನಾವು ರಾಜನ ಸ್ಥಾನದಲ್ಲಿ ನಿಂತು ಶತ್ರುವಿನೊಂದಿಗೆ ಹೋರಾಡುವದೂ ಯಾಜಕನ ಸ್ಥಾನದಲ್ಲಿ ನಿಂತು ಎಲ್ಲಾ ಮನುಷ್ಯರಿಗಾಗಿ ದೇವರ ಸಮ್ಮುಖದಲ್ಲಿ ವಿಜ್ಞಾಪಿಸುವದೂ ನಮಗೆ ಅನಿವಾರ್ಯವಾಗಿದೆ. ಆದರೂ ಇದು ನಮ್ಮಿಂದಾಗದು ನಮಗೆ ಸಮಯವಿಲ್ಲಾ ಅಥವಾ ನಾವು ಬೇರೆ ರೀತಿಯಲ್ಲಿ ಸೇವೆಮಾಡುತ್ತೇವೆ ಎಂದು ಹೇಳುವವರಿಗೆ ಒಂದು ಸತ್ಯವನ್ನು ಹೇಳಲು ಬಯಸುತ್ತೇವೆ. ಒಂದು ನಿಮಿಷ ನೀವು ನಿಮ್ಮ ಸ್ವಂತ ಜೀವಿತದ ಕುರಿತಾದ ನಿಮ್ಮ ಸ್ವಾರ್ಥ ಚಿಂತನೆಗಳನ್ನೂ ಕನಸುಗಳನ್ನೂ ನಿಮ್ಮದೇ ಆದ ಯೋಜನೆಗಳನ್ನೂ ಬದಿಗಿರಿಸಿ ದೇವರ ದೃಷ್ಠಿಯಲ್ಲಿ ನೀವು ಹೇಗಿದ್ದೀರಿ? ನಿಮ್ಮ ಜೀವನದ ಕುರಿತಾಗಿ ಆತನು ರೂಪಿಸಿರುವ ಯೋಜನೆಗಳೇನು? ಯಾತಕ್ಕಾಗಿ ಈ ಭೂಮಿಯಲ್ಲಿ ಜೀವಿಸುತ್ತಿದ್ದೀರಿ ನಿಮ್ಮದೇ ಆದ ಪ್ರಪಂಚದಲ್ಲಿ ವಿಹರಿಸಲೋ ಅಥವಾ ನಿಮ್ಮ ಸೃಷ್ಠಿಕರ್ತನ ಪ್ರಯೋಜನಕ್ಕಾಗಿಯೋ? ಎಂಬದನ್ನು ಆಲೋಚಿಸಿರಿ ! ದೇವರು ಹೇಗೆ ನಿಮ್ಮನ್ನು ಒಬ್ಬ ರಾಜರಾಗಿ ಯಾಜಕರಾಗಿ ಕಾಣುತ್ತಿರುವರೋ ನೀವೂ ನಿಮ್ಮನ್ನು ಹಾಗೆಯೇ ನೋಡಿರಿ ನೀವು ನಿಮ್ಮನ್ನೂ ನಿಮ್ಮ ಜೀವಿತವನ್ನೂ ಕುರಿತಾಗಿ ಯೋಚಿಸುವ ವಿಧವನ್ನು ಬದಲಾಯಿಸಿರಿ ! ದೇವರ ಕೈಗಳಲ್ಲಿ ನಿಮ್ಮ ಜೀವಿತವನ್ನು ರೂಪಾಂತಕ್ಕಾಗಿ ಒಪ್ಪಿಸಿಕೊಡಿರಿ! ದೇವರ ವಾಕ್ಯದ ಗೂಡಾರ್ಥಗಳನ್ನು ಪ್ರಕಟಿಸುವಂತೆ ದೇವರಾತ್ಮನಲ್ಲಿ ಬಿನ್ನಹಿಸಿರಿ ದೇವರ ಸಮ್ಮುಖದಲ್ಲಿ ಕಾದಿರಿ! ದೇವರಾತ್ಮನ ಮಾರ್ಗದಲ್ಲಿ ಮುನ್ನಡೆಯಿರಿ.
ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೇನೆಂದರೆ ಹೇಗೆ ದೇವರ ಬಳಿಯಲ್ಲಿ ನಾವು ನಮಗಾಗಿ ಬೇಡಿ ಪಡೆದುಕೊಳ್ಳಲು ದೇವರ ಮಕ್ಕಳು ಎಂಬ ಸ್ಥಾನ ನಮಗಿದೆಯೋ ಹಾಗೆಯೇ ಪರರಿಗಾಗಿ ವಿಜ್ಞಾಪಿಸಲು ಅದರದೇ ಆದ ಸ್ಥಾನ ಮಾನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
ಹೇಗೆ ಒಂದು ಕೀಲಿಕೈ ಇಲ್ಲದೆ ಬಾಗಿಲನ್ನು ತೆರೆಯಲಾಗುವದಿಲ್ಲವೋ ಹಾಗೆಯೇ ಅರ್ಹರಾಗದೆ-ಅಧಿಕಾರವನ್ನು ತಿಳಿದುಕೊಳ್ಳದೆ ನಾವು ನಮ್ಮ ಸ್ಥಾನದಲ್ಲಿ ನಿಂತು ಕಾರ್ಯನಿರ್ವಹಿಸಲಾಗುವದಿಲ್ಲ.
ಹಾಗಾದರೆ ಬನ್ನಿ ಅವುಗಳನ್ನು ತಿಳಿದುಕೊಳ್ಳೋಣ!
1. ಪರಿಶುದ್ಧತೆ:
ಪರಿಶುದ್ಧತೆಯ ಬಗ್ಗೆ ಅನೇಕ ಬೋಧನೆಗಳುಂಟು ಆದರೆ ಇಲ್ಲಿ ನಿಮಗೆ ಯೇಸುಕ್ರಿಸ್ತನ ಮಾದರಿಯನ್ನು ಪರಿಚಯಿಸುತ್ತಿದ್ದೆವೆ. ಪರಿಶುದ್ಧತೆ ಎಂದರೆ ದೇವರಿಗಾಗಿ ಪ್ರತ್ಯೇಕಿಸಲ್ಪಟ್ಟ ಜೀವಿತ ಜೀವಿಸುವದು, ಅದು ಅಂತರಂಗದಲ್ಲಿ ಪ್ರಾರಂಭಿಸುತ್ತದೆ !
ತೋರಿಕೆಗಾಗಿ ಜನರಮುಂದೆ ಮತ್ತು ಸಭೆಗಳಲ್ಲಿ ಪರಿಶುದ್ಧರಂತೆ ವರ್ತಿಸುವದು ಪರಿಶುದ್ಧ ಜೀವಿತವಲ್ಲ ಹೃದಯವನ್ನು ಪರಿಶೋಧಿಸುವವನೂ ಬಾಯಿಂದ ಮಾತುಗಳು ಹೊರಡುವ ಮೊದಲೇ ಅವುಗಳನ್ನು ಅರಿತವನು ಆಗಿರುವ ದೇವರ ಮುಂದೆ ನಂಬಿಗಸ್ಥರಾಗಿ ಬಾಳುವದೇ ಪರಿಶುದ್ಧ ಜೀವಿತ (ಆದಿಕಾಂಡ 17:1) ಪ್ರಾರ್ಥನೆಗೆ ಪರಿಶುದ್ಧತೆಯೇ ಭೂಷಣ ಯಾಕೆಂದರೆ ಪರಿಶುದ್ಧತೆಯಿಲ್ಲದೆ ಯಾವನೂ ದೇವರನ್ನು ಕಾಣುವದಿಲ್ಲ (ಇಬ್ರಿಯರಿಗೆ 12:15) ದೇವರನ್ನು ನಾವು ಸಂದಿಸುವ ಸಮಯವು ಪ್ರಾರ್ಥನೆಯಾಗಿದೆ ! ಅಲ್ಲಿಯೇ ನಾವು ದೇವರ ಮುಖವನ್ನು ದರ್ಶಿಸುವವು !
2. ದೇವರಲ್ಲಿ ನೆಲೆಗೊಂಡಿರುವದು :
ದೇವರಲ್ಲಿ ನೆಲೆಗೊಳ್ಳುವದೆಂದರೆ ಹೇಗೆ ನೀರಿನ ಬುಗ್ಗೆಯೂ ಎಲ್ಲಾ ಕಾಲಗಳಲ್ಲಿಯೂ ಬತ್ತಿಹೋಗದೆ ನೀರು ಉಕ್ಕಿಸುತ್ತದೋ ಹಾಗೆಯೇ ನಮ್ಮ ಸಂದರ್ಭ ಸನ್ನಿವೇಶಗಳನ್ನೂ ಜೀವನದ ಹಾಗುಹೋಗುಗಳನ್ನು ಪರಿಗಣಿಸದೆ ದೇವರಲ್ಲಿಯೂ ಆತನ ಕಾರ್ಯದಲ್ಲಿಯೂ ಆಸಕ್ತಿಯಿಂದಿರುವದು ಮತ್ತು ಆತನನ್ನು ಪ್ರೀತಿಸುವದು ! ಆತನನ್ನು ಪ್ರೀತಿಸುವದೆಂದರೆ ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವದು, ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವದೆಂದರೆ ಎಲ್ಲಾ ಮನುಷ್ಯರನ್ನೂ ನಿನ್ನಂತೆಯೇ ಪ್ರೀತಿಸುವದು! (ಯೋಹಾನ 14:23, 15:9-12 ಮತ್ತು ಮತ್ತಾಯ 7:12)
3. ನಂಬಿಕೆ:
ನಂಬಿಕೆ ಎಂಬುದು ಕ್ರೈಸ್ತಜೀವಿತದ ಅಡಿಪಾಯವಾಗಿದೆ! ನಂಬಿಕೆಯೇ ನಾವು ರಕ್ಷಣೆ ಹೊಂದಲು ಮೊದಲ ಹೆಜ್ಜೆಯಾಗಿದೆ(ಅಪೋಸ್ತಲರ ಕೃತ್ಯ 16:31) ಮತ್ತು ಪ್ರಾರ್ಥನೆಗೆ ನಂಬಿಕೆ ಜೀವನಾಡಿಯಾಗಿದೆ ಯಾಕೆಂದರೆ ನಂಬಿಕೆಯಿಲ್ಲದೆ ದೇವರಬಳಿಯಿಂದ ಏನನ್ನೂ ಹೊಂದಲಾರೆವು (ಯಾಕೋಬನು 1:6-7) ಕ್ರಿಯೆಗಳಿಲ್ಲದ ನಂಬಿಕೆಯೂ ನಂಬಿಕೆಯಿಲ್ಲದ ಪ್ರಾರ್ಥನೆಯೂ ಸತ್ತದ್ದೇ ಆದ್ದರಿಂದ " ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ ಎಂಬುದು ನಮ್ಮ ಕರ್ತನಾದ ಯೇಸುಕ್ರಿಸ್ತನ ಮಾದರಿಯಾಗಿದೆ, ನಂಬಿಕೆಯು ಆತ್ಮೀಕ ರಣರಂಗದಲ್ಲಿ ಶತ್ರುವಿನ ಅಗ್ನಿಬಾಣಕ್ಕೆ ನಮ್ಮನ್ನು ತಪ್ಪಿಸಿ ಕಾಪಾಡುವ ಗುರಾಣಿಯಾಗಿದೆ (ಎಫೆಸದವರಿಗೆ 6:16)
4. ನಂಬಿಗಸ್ಥಿಕೆ (ಪ್ರಾಮಾಣಿಕತೆ):
ನಾವು ನಮ್ಮ ಅನುದಿನದ ಸಾಮಾನ್ಯ ಜೀವನದಲ್ಲಿ ಪ್ರತಿಯೊಬ್ಬರೂ ನಮ್ಮಿಂದ ಪ್ರಾಮಾಣಿಕತೆಯನ್ನು ಎದುರುನೋಡುವದನ್ನು ಗ್ರಹಿಸಬಹುದು. ಅಪ್ರಾಮಾಣಿಕರಾದ ಮನುಷ್ಯ್ರರೇ ಪ್ರಾಮಾಣಿಕತೆಯನ್ನು ಎದುರುನೋಡುವದಾದರೆ ಪರಿಶುದ್ಧನೂ ನೀತಿವಂತನೂ ಆಗಿರುವ ಸರ್ವಶಕ್ತನಾದ ದೇವರು ನಮ್ಮ ಬಳಿ ಪ್ರಾಮಾಣಿಕತೆಯನ್ನು ಎದುರುನೋಡುವದು ನ್ಯಾಯವಲ್ಲವೇ? ಪ್ರಾಮಾಣಿಕತೆ ಎಂದರೆ ಅಂತರಂಗವಾಗಿಯೂ
ಬಹಿರಂಗವಾಗಿಯೂ ದೇವರಿಗಾಗಿ ಜೀವಿಸುವದರಲ್ಲಿಯೂ ಆತನಿಗಾಗಿ ಕಾರ್ಯಗಳನ್ನು ಮಾಡುವದರಲ್ಲಿಯೂ ನೂರಕ್ಕೆ ನೂರರಷ್ಠು ಆತನ ಮಾರ್ಗದಲ್ಲಿ ನಡೆಯುವದು ಸ್ವಲ್ಪವೂ ನಮ್ಮ ಸ್ವಂತ ಬಯಕೆಯಿಂದಾಗಲಿ ಆಲೋಚನೆಯಿಂದಾಗಲೀ ಸ್ವಂತ ಲಾಭಕ್ಕಾಗಿ ಏನನ್ನೂ ಮಾಡದೆ ಆತನ ಚಿತ್ತವನ್ನು ಮಾತ್ರವೇ ಮಾಡುವದು! ಹೀಗೆ ಪ್ರತಿಯೊಂದು ಕಾರ್ಯವನ್ನೂ ದೇವರ ಆಲೋಚನೆಯಂತೆ ಮಾಡಿದ ಮೋಶೆಯನ್ನು ದೇವರು ಇವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ಥನೆಂದು ಸಾಕ್ಷಿ ಕೊಡುತ್ತಾರೆ (ಅರಣ್ಯಕಾಂಡ 12:7) ಆದರೆ ಇದೇ ಮೋಶೆ ದೇವರ ಆಲೋಚನೆಯೊಂದಿಗೆ ತನ್ನ ಅಸಹನೆಯನ್ನು ಬೆರೆಸಿದಾಗ ಕಾನಾನಿನ ಮಹಾ ಭಾಗ್ಯವನ್ನು ಕಳೆದುಕೊಂಡು ಕಾನಾನಿನ ಬಾಗಲಲ್ಲೆ ತನ್ನ ಜೀವನವನ್ನು ಅರ್ಧಕ್ಕೆ ಮುಗಿಸುತ್ತಾನೆ (ಧರ್ಮೋಪದೇಶಕಾಂಡ 32: 48-52 ) ಆದ್ದರಿಂದ ಕಡೆವರೆಗು ಕರ್ತನಿಗೆ ನಂಬಿಗಸ್ಥರಾಗಿ ಜೀವಿಸುವದೇ ಪ್ರಾರ್ಥನೆಯಲ್ಲಿಯೂ ಜೀವನದಲ್ಲಿಯೂ ಜಯಭರಿತ ಜೀವಿತವಾಗಿದೆ.
5. ಕ್ರಮವಾದ ಪ್ರಾರ್ಥನಾ ಜೀವಿತ:
ಅನುದಿನವು ದೇವರಸಮ್ಮುಖದಲ್ಲಿ ದೇವರೊಂದಿಗೆ ಸಮಯ ಕಳೆಯುವದು ಒಬ್ಬ ಪ್ರಾರ್ಥನಾ ವೀರನ ಅಥವಾ ಆತ್ಮೀಕ ನಾಯಕನ ಜೀವನದ ಅಂಗವಾಗಿದೆ. ಪ್ರಾರ್ಥನೆಯು ನಮ್ಮ ಅಂತರ್ಯ ಮನುಷ್ಯನು ಬಲಗೊಳ್ಳುವ ಸಮಯವು ನಾವು ದೇವರ ಯೋಜನೆಗಳನ್ನು ಅರಿಯುವ ಸ್ಥಳವೂ ಆಗಿದೆ!(ಯೆಶಾಯ 40:31 ದಾನಿಯೆಲ 2:18-19)
ಆದರೆ ಪ್ರಾರ್ಥನೆಯಲ್ಲಿ ಕ್ರಮ ಮತ್ತು ಶಿಸ್ತು ಅತ್ಯಗತ್ಯವಾದದ್ದು. ಕ್ರಮವಿಲ್ಲದ್ದು ಅಂದರೆ ಅಸಡ್ಡೆತನತನದ ಪರಮಾವಧಿ ಪ್ರಾರ್ಥನೆಯಲ್ಲಿ ನಿರಾಸಕ್ತರಾಗಿ ಶರೀರದ ಆಯಾಸವನ್ನೂ ಸಂದರ್ಭ ಸನ್ನಿವೇಶಗಳ ಕಾರಣಗಳನ್ನು ಹೇಳಿ ತನ್ನನ್ನು ತಾನೇ ವಂಚಿಸಿಕೊಳ್ಳುವದು, ಹೊರಗೆ ಸೇವೆಗಾಗಿ ಹೋಗುತ್ತಿದ್ದೇನೆ, ಮನೆಸಂಧಿಸಲು ಹೋಹುತ್ತಿದ್ದೇನೆ ಎಂದು ಪ್ರಾರ್ಥನೆಗೆಂದು ಮೀಸಲಾದ ಸಮಯದಲ್ಲಿ ಬೇರೆ ಕೆಲಸಗಳನ್ನು ಯೋಜಿಸಿಕೊಂಡು ದೇವರ ಕೆಲಸಕ್ಕಾಗಿಯೇ ಹೋಗುತ್ತಿದ್ದೇನೆ ಎಂದು ನೆಪಗಳನ್ನು ಹೇಳಿ ಅಸಡ್ಡೆ ಮಾಡುದಾದರೆ ನೀವು ನಿಮ್ಮೊಳಗಿರುವ ಅಗ್ನಿಯನ್ನು ಕಳೆದುಕೊಂಡು ದೇವರಿಗಾಗಿ ಪ್ರಕಾಶಿಸಲಾರದೆ ತಣ್ಣಗಾಗಿಬಿಡುವಿರಿ (ಹಿಂಜಾರಿ ಹೋಗುವಿರಿ) ನೆನಪಿರಲಿ ಅನುದಿನವು ನಿಮ್ಮನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿ ದೇವರ ಬಳಿಯಿಂದ ಆಲೋಚನೆ ಹೊಂದಿ ಅದರಂತೆ ನಡೆಯದಿದ್ದರೆ ನೀವು ದಾರಿತಪ್ಪಿ ನಿಮ್ಮ ಗುರಿಯನ್ನು ಕಳೆದುಕೊಳ್ಳುವದು ನಿಶ್ಚಯ (ರೋಮಾಪುರದವರಿಗೆ 12:1-2 )